Description
ಚಾರಿತ್ರಿಕವಾಗಿ ಕೊಡಗಿನ ಸಮಾಜವನ್ನು ಕಟ್ಟಿಕೊಡುವುದರ ಜೊತೆಗೆ ಸಮಕಾಲೀನ ದಲಿತ-ಬುಡಕಟ್ಟು ಜಗತ್ತನ್ನು ಪರಿಚಯಿಸುವ ಪ್ರಯತ್ನವನ್ನು ಮಾಡಿರುವುದು ಈ ಸಂಶೋಧನೆಯ ವಿಶಿಷ್ಟತೆಯಾಗಿದೆ. ಈ ಜಗತ್ತಿನಲ್ಲಿ ಕಂಡ ಬದುಕು, ಫ್ಯಾಂಟಸಿ, ಸುಖ, ದುಃಖ, ದುಮ್ಮಾನ, ಅಸಹಾಯಕತೆಗಳನ್ನು ಪ್ರಸ್ತುತ ಕೃತಿಯು ದಾಖಲಿಸುವ ಪ್ರಯತ್ನ ಮಾಡಿದೆ. ತಮ್ಮ ಮೇಲಾದ ದಬ್ಬಾಳಿಕೆಯ ವಿರುದ್ಧ ಈ ಸಮುದಾಯಗಳು ತೋರಿದ ಪ್ರತಿರೋಧಗಳ ವಿವಿಧ ನೆಲೆಗಳು ಪ್ರಸ್ತುತ ಸಂಶೋಧನೆಯಲ್ಲಿ ವಿಮರ್ಶೆಗೊಳಪಟ್ಟಿವೆ. ಇಂತಹ ಅವಿಸ್ಮರಣೀಯ ಮತ್ತು ಬಹಳ ಮಹತ್ವದ ಸಂಶೋಧನೆಯನ್ನು ಕೈಗೊಂಡು ಮನಮುಟ್ಟುವ ಭಾಷೆಯಲ್ಲಿ ದಾಖಲಿಸಿ ತಳಸಮುದಾಯಗಳನ್ನು ಚರಿತ್ರಾರ್ಹರನ್ನಾಗಿಸಿದ ಕೀರ್ತಿಯು ಡಾ. ವಿಜಯ್ ಪೂಣಚ್ಚ ತಂಬಂಡ ಹಾಗೂ ಅವರ ಸಂಶೋಧನಾ ತಂಡಕ್ಕೆ ಸಲ್ಲುತ್ತದೆ.
ಪ್ರೊ. ಎಂ. ಶಶಿಧರ್
ಚರಿತ್ರೆ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ(ಜ್ಞಾನಭಾರತಿ ಆವರಣ)
ಚರಿತ್ರೆ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿರುವ ಡಾ. ವಿಜಯ್ ಪೂಣಚ್ಚ ತಂಬಂಡ ಅವರ ಕಾಡುಮಕ್ಕಳ ಕೂಗು-ಕೊಡಗು ದಲಿತ ಬುಡಕಟ್ಟು ನಾಯಕರ ಕಥನಗಳು ಎನ್ನುವ ಕೃತಿಯು ಪಶ್ಚಿಮಘಟ್ಟಗಳ ಪ್ರದೇಶದಲ್ಲಿ ವಾಸಿಸುತ್ತಿರುವ ದಲಿತ-ಬುಡಕಟ್ಟು ಸಮುದಾಯಗಳ ಚಾರಿತ್ರಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಗಳನ್ನು ಅನಾವರಣ ಮಾಡುತ್ತದೆ. ಕರ್ನಾಟಕ ಸರ್ಕಾರದ ಪತ್ರಾಗಾರ ಇಲಾಖೆಯ ಅನುದಾನದಿಂದ ಈ ಯೋಜನೆಯನ್ನು ಪೂರ್ಣಗೊಳಿಸಿರುವುದಕ್ಕೆ ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಪ್ರಸ್ತುತ ಕೃತಿಯಲ್ಲಿ ದಾಖಲಾಗಿರುವ ಒಂದೊಂದು ಸಂದರ್ಶನವೂ ಒಂದೊಂದು ಬಗೆಯ ಕಥನವಾಗಿದೆ. ಅಂತಹ ಒಂದೊಂದು ಕಥನವು ಮುಖ್ಯವಾಹಿನಿಯಲ್ಲಿ ಚರ್ಚೆಗೊಳಗಾಗದ ನೂರಾರು ಕಥೆಗಳನ್ನು ಹೇಳುತ್ತದೆ. ಈ ಕೃತಿಯಲ್ಲಿ ದಾಖಲಾಗಿರುವ ಜನಪದ ಕಾವ್ಯಗಳು, ಕಥನಗಳು ಕರ್ನಾಟಕದ ಮೌಖಿಕ ಪರಂಪರೆಗೆ ಹೊಸ ಸೇರ್ಪಡೆಯಾಗಿವೆ. ಹಸಿವು, ಅಸ್ಪೃಶ್ಯತೆ, ಅವಮಾನ, ದೌರ್ಜನ್ಯಗಳನ್ನು ಎದುರಿಸಿ ಆಧುನಿಕ ಯುಗಕ್ಕೆ ಮುಖಾಮುಖಿಯಾಗುವ ಹಲವು ಸಂದರ್ಭಗಳನ್ನು, ಹೋರಾಟಗಳನ್ನು ಪ್ರಸ್ತುತ ಕೃತಿಯುದ್ದಕ್ಕೂ ನೋಡಬಹುದು. ಇವು ಅಸಾಂಪ್ರದಾಯಿಕ ಕಥನಗಳ ಶೈಲಿಯನ್ನು ಹೊಂದಿದ್ದರೂ ಈ ಸಮುದಾಯಗಳ ಆಂತರಿಕ ತುಮುಲಗಳನ್ನು, ಅಂತರ್ಗತವಾಗಿರುವ ಸಮಸ್ಯೆಗಳ ಸಂಕೀರ್ಣತೆಯನ್ನು ಮತ್ತು ಇವರು ಸಮಾನ ಅವಕಾಶಗಳಿಗಾಗಿ ತುಡಿಯುವ ಬಗೆಗಳನ್ನು ಈ ಕೃತಿಯು ದಾಖಲಿಸಿದೆ. ಸಾಹಿತ್ಯ, ಜನಪದ ಮತ್ತು ಸಮಾಜವಿಜ್ಞಾನಗಳ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಈ ಕೃತಿಯು ಉಪಯುಕ್ತವಾಗುವುದು. ಪ್ರಸ್ತುತ ಕೃತಿಯನ್ನು ರಚಿಸಿದ ಡಾ. ವಿಜಯ್ ಪೂಣಚ್ಚ ತಂಬಂಡ ಅವರಿಗೆ ಮತ್ತು ಅವರ ಸಂಶೋಧನಾ ತಂಡಕ್ಕೆ ಶುಭ ಹಾರೈಸುವೆನು.
ಡಾ. ಸ.ಚಿ. ರಮೇಶ
ಕುಲಪತಿಗಳು
ಕನ್ನಡ ವಿಶ್ವವಿದ್ಯಾಲಯ, ಹಂಪಿ
Reviews
There are no reviews yet.