Description
ಒಂದು ರೀತಿಯಲ್ಲಿ ಈ ಕೃತಿ ಹೇಗಿದೆಯೆಂದರೆ ಕಾದಂಬರಿಯೊಂದರ ಕಥಾನಕ ಭಾಗವನ್ನು ಬೇರ್ಪಡಿಸಿ ಕೇವಲ ಸ್ಥಳ, ವ್ಯಕ್ತಿ, ಶೈಕ್ಷಣಿಕ ಸ್ಥಿತಿಗತಿ, ಮನೆತನ, ಇತ್ಯಾದಿಗಳನ್ನು ಭಾವಶೀಲತೆಯಿಂದ ವಿವರಣಾತ್ಮಕ ಮತ್ತು ಸಣ್ಣದೊಂದು ವಿಮರ್ಶೆಯ ಶೈಲಿಯಲ್ಲಿ ಉಲ್ಲೇಖವಾದಂತೆ. ಇವುಗಳ ಸುತ್ತ ಸುಮ್ಮನೆ ಒಂದು ಕಥಾನಕವನ್ನು ಹೆಣೆದರೆಂದರೆ ಅದು ಕಾರಂತರ ಕಾದಂಬರಿಯನ್ನು ನೆನಪಿಸುವ ಒಂದು ಕಾದಂಬರಿಯ ರೂಪ ತಳೆದೀತು. ಆತ್ಮನಿರೀಕ್ಷಣೆ, ತಿಳಿಹಾಸ್ಯ, ಆತ್ಮ ನಿವೇದನೆ, ಪಶ್ಚಾತ್ತಾಪ, ತಪ್ಪೊಪ್ಪಿಗೆ, ಕೆಲವರ ಮೇಲೆ (ಉದಾ: ಮಾಬಲ ಮಾಸ್ಟ್ರು) ಅಳಿದಂತೆ ಕಂಡೂ ಅಳಿದಿಲ್ಲದ ಕೋಪ, ಹಳಹಳಿಕೆ ಇತ್ಯಾದಿ ಎಲ್ಲದರ ಸಂಗಮವಾಗಿದೆ ಇಲ್ಲಿನ ನಿರೂಪಣೆ.
ಎಲ್ಲ ಸಾತ್ವಿಕ ಸ್ತ್ರೀಯರ ನಡುವೆ ಪರಚಿ ನಿಂತಂತೆ ಕಾಣುವ ಆ ಗರಾಸಿ ಚಂದುವಿನ (ಚಿಕ್ಕಪ್ಪನ ಉಪಪತ್ನಿಯ) ಚಿತ್ರ ಎಷ್ಟು ಜೀವಂತವಾಗಿದೆ! ಸಣ್ಣದೊಂದು ಕ್ಯಾಪ್ಸೂಲಿನಲ್ಲಿ ಅಡಗಿಸಿ ಹೇಳಿದ, ಅಂದಿನ ಲಜ್ಜೆಯೆಂಬುದೇ ಇಲ್ಲದ ಭಯವೂ ಇಲ್ಲದ ಗಂಡಸರ ರಾಜಾರೋಷ ಹಾದರದ ಮತ್ತು ತಮ್ಮನ್ನು ಇಟ್ಟುಕೊಂಡವ-ರಿಂದಾಗಿಯಷ್ಟೇ ಧ್ವನಿ ಪಡೆವ, ಅವರು ತೀರಿದ್ದೇ ಧ್ವನಿ ಝರ್ರನೆ ಇಳಿಯುತ್ತ ಹೋಗುವ ಕೆಲ ದಢಾಸಿ ಸ್ತ್ರೀಯರ ಯಥಾರ್ಥ ಚಿತ್ರಣವದು. ಆ ಚಂದು ತೀರಿಕೊಂಡಾಗ, ‘ನಿನ್ನ ಕಿರಿಯಬ್ಬೆ ಹೋದ್ಲು’ ಎಂದು ತಾಯಿ ತಮಾಷೆ ರೂಪದಲ್ಲಿ ಮಗನಿಗೆ ಸುದ್ದಿ ಅರುಹಿದ್ದನ್ನು ಓದಿದವಳಿಗೆ ನನ್ನಷ್ಟಕ್ಕೇ ನಗೆ. ನಮ್ಮ ಕಡೆ ಸ್ತ್ರೀಯರ ಮಾತಿನಲ್ಲೇ ಹಾಸ್ಯ ಕೋಪ ಮತ್ತು ವ್ಯಂಗ್ಯದ ಅಲಗುಗಳು ಗೊತ್ತಾಗಬೇಕಾದÀವರಿಗೆ ಮಾತ್ರ ಗೊತ್ತಾಗುವಂತೆ ಹೇಗಿರುತ್ತವೆ ಎಂಬುದಕ್ಕೆ ಇದೊಂದು ತೀರ ಸಣ್ಣ ಉದಾಹರಣೆ ಅಷ್ಟೆ. ನಾನು ಕಂಡಂತೆÉ ನಮ್ಮಲ್ಲಿನ ಮಾತುಗಳಲ್ಲಿ ಕವಿತೆಯ ಅಲಗುಗಳೂ ಅಲ್ಲಲ್ಲೆ ಮಡಚಿ ಹುದುಗಿರುತ್ತವೆ. ಇಲ್ಲಿನ ಅನೇಕರ ಕತೆ, ಅದರಲ್ಲಿಯೂ ಅವಳು ಹಾಡುವ ಆ ಚೆಲುವಾದ ಹಾಡಿನ ಸಮೇತ ನೆನೆದ ಕಾಶಮ್ಮಕ್ಕನ ಅರೆತೆರೆದ ಕತೆಯಂತೂ ಬರೆಯದ ಕಾದಂಬರಿಯ ಒಂದು ಪಾತ್ರದಂತೆಯೇ ಇದೆ. ಇತ್ತ ಉಪ್ಪರಿಗೆಯಲ್ಲಿ ಕಿಟ್ಟಕ್ಕನೆಂಬ ಚಿಕ್ಕಮ್ಮನ ನಿಧನ, ಅತ್ತ ಮೂಡುಚಾವಡಿಯಲ್ಲಿ ಅವಳಿಜವಳಿ ಹೆಣ್ಣು ಮಕ್ಕಳ ಜನನ! ದೇವರೆ! ಅಂದಿನ ವಿದ್ಯಮಾನಗಳಿಗೆ ಯಾವ ಲಂಗುಲಗಾಮಿಲ್ಲದೆ ಹೋಯಿತೆ! ನನಗೆ ಸಂಬಂಧಿಯೂ ಆಗಿರುವ ಅವರ ಕೊನೆಯ ತಂಗಿ ಯಶೋದೆ ಒಮ್ಮೊಮ್ಮೆ ಸಿಗುವುದಿದೆ. ಇನ್ನವಳು ಸಿಕ್ಕರೆ ಹೇಳಿಕೊಳ್ಳಲು ಮಾತಾಡಿಕೊಳ್ಳಲು ನನಗೆ ಇದೆಲ್ಲ ಇದೆ! ಒಮ್ಮೆ ತನ್ನ ಸೋದರಿಯರೊಂದಿಗೆ ಪತ್ನಿ ಲಕ್ಷ್ಮಿಯ ಜೊತೆಗೂಡಿ ನಾಗೈತಾಳರು ನಮ್ಮ ಮನೆಗೂ ಬಂದಿದ್ದರು. ಮಾತು ನಗೆ ಕುಶಾಲುಗಳ ನಡುವೆ ಸಮಯ ಸಂದದ್ದೇ ತಿಳಿಯದೆ ಪುರ್ರನೆ ಹಾರಿಹೋದ ಸಂಜೆಯದು. ಅವರಾಡುತಿದ್ದ ತೀರಾ ಗ್ರಾಮ್ಯ ಕನ್ನಡವನ್ನು ಕೇಳಿ ನಾನು ಬೆಪ್ಪಾಗಿಬಿಟ್ಟಿದ್ದೆ. ನಮ್ಮ ಕೋಟಗನ್ನಡವನ್ನು ಅದರ ಅಪ್ಪಟ ಗ್ರಾಮ್ಯರೂಪ ಒಂಚೂರೂ ಕೆಡದಂತೆ ಅದರ ಸಂಕ್ಷಿಪ್ತತೆ, ಎಳೆತ ರಾಗ ಉಚ್ಚಾರಗಳ ಸಮೇತ ಉಳಿಸಿಕೊಂಡ ಅಪರೂಪದವರಲ್ಲಿ ನಾಗೈತಾಳರು ಒಬ್ಬರು. ಅವರು ತಾನು ಬಿಟ್ಟು ಹೋದ ಕಾಲದ ಕೋಟಭಾಷೆಯಲ್ಲೇ ಈಗಲೂ ನೆಲೆಸಿರುವರು. ಕೆಲ ಮಾರ್ಪಾಟುಗಳಿಗೆ ಈಡಾಗಿರುವ ಅದರ ಮೂಲಮಾದರಿ ಈಗ ಬೇಕೆಂದರೆ ಅದು ಸಿಗಬಹುದಾದ ಒಂದು ಸಂಪನ್ಮೂಲ ನಾಗೈತಾಳರು ಎಂಬ ನಂಬಿಕೆ ನನ್ನದು.
-ವೈದೇಹಿ
(ಮುನ್ನುಡಿಯಿಂದ)
Reviews
There are no reviews yet.