Description
ಸಂಪಾದಕರು: ಅಸಿತಾ ಪ್ರಭುಶಂಕರ, ನ. ರವಿಕುಮಾರ
ಪ್ರಕಾಶನ: ಅಭಿನವ, ಬೆಂಗಳೂರು
*************************
‘ಸಂತೋಷವನ್ನು ಉಕ್ಕಿಸುತ್ತಾ
ನಗೆಯನ್ನು ಚಿಮ್ಮಿಸುತ್ತಿದ್ದ ಜೀವ’
ನಾನು ದಿಲ್ಲಿಯಲ್ಲಿದ್ದಾಗ ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯ ಒಂದು ಸಭೆಗೆ NCERTಯ ಪರವಾಗಿ ಹೋಗಿದ್ದೆ. ಕರ್ನಾಟಕದಿಂದ ಪ್ರಭುಶಂಕರರು ಬಂದಿದ್ದರು. ನಾನು ಮೊದಲ ಬಾರಿಗೆ ಅವರನ್ನು ನೋಡಿದ್ದು ಆಗ. ಕಪ್ಪು ಬಣ್ಣದ, ಇನ್ನಷ್ಟು ಎತ್ತರವಿರಬೇಕಿತ್ತೆನ್ನಿಸುವ, ಸಂತೋಷವು ತುಳುಕುವ, ಆಶಾವಾದವು ಉಕ್ಕುವ ದುಂಡುಮುಖದ ಹಸನ್ಮುಖಿ, ನನ್ನ ಕಾದಂಬರಿ ವಂಶವೃಕ್ಷವನ್ನು ಓದಿದ್ದರು. ಸಭಾಭವನದ ಒಂದು ಮೂಲೆಯಲ್ಲಿ ಕೂತು ಅರ್ಧ ಗಂಟೆಗೂ ಮಿಕ್ಕು ಮಾತನಾಡಿದೆವು. ಯಾವುದಕ್ಕೂ ಇಲ್ಲವೆನ್ನದ ತಥಾಸ್ತು ಎನ್ನುವ ಕರ್ಣಶೈಲಿ ಇವರದು ಎನ್ನಿಸಿತು.
ಒಂದು ವರ್ಷದ ನಂತರ ಮೈಸೂರಿನ ಪ್ರಾದೇಶಿಕ ಶಿಕ್ಷಣ ಕಾಲೇಜಿಗೆ ನಾನು ವರ್ಗವಾಗಿ ಬಂದೆ. ಅವರೇ ಕಾಲೇಜಿಗೆ ಬಂದು ನನಗೆ ಸ್ವಾಗತ ಹೇಳಿದರು. ಕಾಲೇಜಿನ ಎದುರಿಗೇ ಅವರ ಮನೆ. ಹೀಗಾಗಿ ನಮ್ಮಿಬ್ಬರಿಗೂ ಸ್ನೇಹವು ಬಹುಬೇಗ ಬೆಳೆಯಿತು. ತುಸು ಸ್ನೇಹ ಉಂಟಾದರೂ ಅದನ್ನು ಸಲಿಗೆಗೆ ಬೆಳೆಸುವುದು, ತಮಗಿಂತ ತುಸು ಸಣ್ಣವರಾದರೆ ಏಕವಚನದಲ್ಲಿ ಮಾತನಾಡುವುದು ಅವರ ಅಭ್ಯಾಸ, ಅವರು ನನಗಿಂತ ಎರಡು ವರ್ಷಕ್ಕೆ ಹಿರಿಯರು. ಹೀಗಾಗಿ ಅವರು ನನ್ನನ್ನು ಬಹುಬೇಗ ಏಕವಚನದ ಸಲಿಗೆಯಿಂದ ಸಂಬೋಧಿಸತೊಡಗಿದರು. ಎಷ್ಟೋ ದಿನ ನಾನು ಮಧ್ಯಂತರ ಅವಧಿಯಲ್ಲಿ ನನ್ನ ಊಟದ ಡಬ್ಬಿಯ ಜೊತೆಯಲ್ಲಿ ಅವರ ಮನೆಗೆ ಹೋಗಿ ನನ್ನ ಪಲ್ಯವನ್ನು ಅವರಿಗೆ ಕೊಟ್ಟು ಅವರ ಮನೆಯ ಸಾರನ್ನೋ ಪಲ್ಯವನ್ನೋ ಇಸಕೊಂಡು ಸ್ವಲ್ಪ ಹರಟೆ ಹೊಡೆದು ಹಿಂತಿರುಗುತ್ತಿದ್ದೆ.
ಅವರಿಗೆ ಇಬ್ಬರು ಹೆಣ್ಣುಮಕ್ಕಳು. ಅವರು ತಂದೆಯನ್ನು ‘ಅಪ್ಪಾಜಿ’ ಎನ್ನುತ್ತಿದ್ದರು. ತಮಾಷೆಗೆ ನಾನೂ ಅವರನ್ನು ಯಾವಾಗಲಾದರೊಮ್ಮೆ ‘ಅಪ್ಪಾಜಿ’ ಎಂದು ಕರೆಯುತ್ತಿದ್ದೆ. ಒಂದು ದಿನ ಅವರು ನನ್ನನ್ನು ಕೇಳಿದರು: ‘ನಿನಗೆ ಎಷ್ಟು ಮಕ್ಕಳು? ಎಂಥೆಂಥವರು? ‘ಇಬ್ಬರು ಗಂಡು ಮಕ್ಕಳು’ ಎಂದೆ.
ಹೀಗಿದ್ದರು. ಪ್ರಧುಶಂಕರ
`ನೀನು ಅದೃಷ್ಟವಂತ. ಗಂಡುಮಕ್ಕಳು ಹೊಟ್ಟೆ ತುಂಬ ಪಿಂಡ ಹಾಕ್ತಾರೆ, ಬರೀ ಹೆಣ್ಣುಮಕ್ಕಳಿರುವ ನನ್ನ ಪ್ರೇತ ಉಪವಾಸ ಇರಬೇಕು’ ಎಂದರು.
ಅಯ್ಯೋ ಪಾಪ! ನಾನು ತಕ್ಷಣ ಅಂದೆ ‘ನನ್ನನ್ನ ದತ್ತು ಮಾಡಿಕೊಂಡುಬಿಡಿ ನಿಮ್ಮ ಆಸ್ತಿಯ ಹಕ್ಕುದಾರನೂ ಆಗ್ತಿನಿ.’
‘ದತ್ತುಪಿತನ ಸಾಲ ತೀರಿಸುವ ಹೊಣೆಯೂ ದತ್ತು ಪುತ್ರನಿಗೆ ಬರುತ್ತೆ ಗೊತ್ತಿದೆಯೆ?’
ಎಂದು ಅವರು ಗಟ್ಟಿಯಾಗಿ ನಕ್ಕರು.
ಪ್ರಭುಶಂಕರ್ ವಿದ್ಯಾರ್ಥಿ ದೆಶೆಯಿಂದಲೂ ರಾಮಕೃಷ್ಣಾಶ್ರಮದ ಭಕ್ತರಾಗಿದ್ದರು. ಬೆಂಗಳೂರಿನಲ್ಲಿ ಉಪನ್ಯಾಸಕರಾಗಿ ನೇಮಕವಾದ ಮೇಲೆ ಅಲ್ಲಿಯ ಆಶ್ರಮಕ್ಕೆ ನಿತ್ಯವೂ ಹೋಗುತ್ತಿದ್ದರು. ಅದೇ ಆಶ್ರಮದ ಅನುಯಾಯಿಯಾಗಿ ಡಾ. ಶಾಂತಮ್ಮನವರೂ ಬರುತ್ತಿದ್ದರು. ಶಾಂತಮ್ಮ ವಕ್ಕಲಿಗರು. ಇವರು ಲಿಂಗಾಯತರಲ್ಲಿ ಉಚ್ಚವೆನ್ನಿಸಿಕೊಳ್ಳುತ್ತಿದ್ದ ಪಂಗಡದವರು, ಪರಮಹಂಸರ ಕೃಪೆಯಾಗಿ ಇವರಿಬ್ಬರೂ ವಿವಾಹವಾದರು.
– ಎಸ್. ಎಲ್. ಭೈರಪ್ಪ
Reviews
There are no reviews yet.