Description
ಭಾರತದ ವಿವಿಧ ಭಾಷೆಗಳ ಅತ್ಯುತ್ತಮ ಲೇಖಕರಿಗೆ ಪ್ರತಿ ವರ್ಷ ನೀಡುವ ʼಕುವೆಂಪು ರಾಷ್ಟ್ರೀಯ ಪುರಸ್ಕಾರʼವನ್ನು 2019ರಲ್ಲಿ ಪಂಜಾಬಿ ಲೇಖಕಿ ಅಜಿತ್ ಕೌರ್ ಅವರಿಗೆ ನೀಡಲಾಯಿತು. ಅದೊಂದು ಸರ್ವಾನುಮತದ ಆಯ್ಕೆಯಾಗಿತ್ತು. ಕುವೆಂಪುರವರ ಹಾಗೆ ಕೌರ್ ಕೂಡಾ ಇಂಗ್ಲಿಷ್ ಓದಲು ಹೋಗಿ ತಾಯ್ನುಡಿಯ ಕಡೆಗೆ ಹೊರಳಿಕೊಂಡವರು.
ಕನ್ನಡದ ಮಹಾಲೇಖಕರೊಬ್ಬರ ಹೆಸರಿನ ಪ್ರಶಸ್ತಿಯು ಸರಿಯಾದವರಿಗೇ ಸಂದಾಯಬೇಕೆಂಬುದು ನನ್ನ ಮಹದಾಸೆಯಾಗಿತ್ತು. ಅದಕ್ಕಾಗಿ ಆ ಸಂದರ್ಭದಲ್ಲಿ ಗೆಳೆಯರ ಸಹಾಯದಿಂದ ಅನೇಕ ಪಂಜಾಬೀ ಲೇಖಕರ ಬಗ್ಗೆ ತಿಳಿದುಕೊಳ್ಳಬೇಕಾಯಿತು. ಆ ಅರಿಯುವ ಪ್ರಕ್ರಿಯೆಯೇ ರೋಚಕವಾಗಿತ್ತು, ಏಕೆಂದರೆ ಪಂಜಾಬೀ ಲೇಖಕರ ಅನುಭವಗಳೇ ಅನನ್ಯ. ಅಜಿತ್ ಕೌರ್ ಕೂಡಾ ಸೇರಿದಂತೆ, ಇವತ್ತು ಬದುಕಿರುವ ಹಿರಿಯ ಪಂಜಾಬೀ ಲೇಖಕರೆಲ್ಲ ಒಂದಲ್ಲ ಒಂದು ರೀತಿಯಿಂದ ಭಾರತ ವಿಭಜನೆಯನ್ನು ಕಂಡವರು. ಹಿಂದೂ ಮುಸ್ಲಿಂ ದ್ವೇಷ ಮತ್ತು ಕ್ರೌರ್ಯಗಳಿಗೆ ಸಾಕ್ಷಿಯಾದವರು. ಆದರೆ ಇದರಿಂದ ಮನಸು ಕಹಿ ಮಾಡಿಕೊಳ್ಳದೆ, ಕೋಮು ಜ್ವಾಲೆಗೆ ಬಲಿಬೀಳದ ಎಚ್ಚರವನ್ನು ಕಾಯ್ದುಕೊಂಡೇ ಅಲ್ಲಿನ ಲೇಖಕರು ಬರೆದರು. ಈ ವಿಷಯದಲ್ಲಿ ಪಂಜಾಬೀ ಲೇಖಕರು ಭಾರತಕ್ಕೆ ಮಾದರಿಯಾಗುವ ಗುಣವುಳ್ಳವರು.
ಪ್ರಸ್ತುತ ಪುಸ್ತಕ ಅಲೆಮಾರಿ ( ಮೂಲ: ಖಾನಾ ಬದೋಶ್ ) ಅಜಿತ್ ಕೌರ್ ಅವರ ಆತ್ಮಚರಿತ್ರೆಯಾಗಿದೆ. ಭಾರತ ವಿಭಜನೆಯೇ ಕಾರಣವಾಗಿ ಬಗೆ ಬಗೆಯ ಸಂಕಷ್ಟಗಳಿಗೆ ಒಳಗಾದ ಅವರು, ಮುಂದೆ ಮಗಳಾಗಿ, ತಾಯಿಯಾಗಿ, ತಂಗಿಯಾಗಿ , ಹೆಂಡತಿಯಾಗಿ, ಪ್ರೇಮಿಯಾಗಿ, ಪತ್ರಿಕೋದ್ಯಮಿಯಾಗಿ, ಲೇಖಕಿಯಾಗಿ, ಮತ್ತೆ ಇನ್ನೇನೋ ಆಗುತ್ತಾ ಹೋಗುವ ಹೊತ್ತು, ಗಟ್ಟಿಯಾಗುತ್ತಾ, ಮರುಕ್ಷಣ ಕರಗುತ್ತಾ ಬದುಕ ಸಾಗಿಸಿದರು. ಸಂವೇದನಾಶೀಲ ಹೆಣ್ಣೊಬ್ಬಳ ಬದುಕಿನ ಈ ಎಲ್ಲಾ ಆಯಾಮಗಳು ʼಅಲೆಮಾರಿʼಯಲ್ಲಿ ಅತ್ಯಂತ ಕಲಾತ್ಮಕವಾಗಿ ಘನೀಕೃತಗೊಂಡಿದೆ. ಕೌರ್ ಅವರ ಸಾಮಾಜಿಕ ಬದ್ಧತೆ ಮತ್ತು ಕ್ರಿಯಾಶೀಲತೆಯು ಈ ವಿವಿಧ ಮುಖಗಳ ಅಭಿವ್ಯಕ್ತಿಯನ್ನು ಇನ್ನಷ್ಟು ಸಾಂದ್ರಗೊಳಿಸಿ, ತೀವ್ರವಾಗಿ ಓದುಗನನ್ನು ಮುಟ್ಟುತ್ತದೆ. ಈಗಾಗಲೇ ಅಮೃತಾ ಪ್ರೀತಂ ಕವಿತೆಗಳನ್ನು ಸುಂದರವಾಗಿ ಕನ್ನಡಕ್ಕೆ ತಂದಿರುವ, ಖುಷವಂತ ಸಿಂಗರಂಥ ಪ್ರಸಿದ್ಧ ಲೇಖಕರೊಡನೆ ಸಂಭಾಷಣೆ ನಡೆಸಿರುವ, ಕವಿ, ಲೇಖಕಿ ರೇಣುಕಾ ನಿಡಗುಂದಿಯವರು, ಅಜಿತ್ ಅವರ ಬರವಣಿಗೆಯ ಕಲಾವಂತಿಕೆಯನ್ನು ಅಷ್ಟೇ ಸುಂದರವಾಗಿ ಕನ್ನಡಕ್ಕೆ ತಂದಿದ್ದಾರೆ. ಅವರೀಗ ಕನ್ನಡ ಮತ್ತು ಪಂಜಾಬಿ ಭಾಷೆಗಳ ನಡುವಣ ಸೇತುವೆ.
ಈಚಿನ ಭಾರತೀಯ ಲೇಖಕರಲ್ಲಿ ಬಹಳ ಜನ ಸಾಹಿತ್ಯ ಸಂಭ್ರಮಗಳಲ್ಲಿ ಕಾಣಿಸಿಕೊಳ್ಳ ಬಯಸುತ್ತಾರೆ. ಅಜಿತ್ ಕೌರ್ ಸಂಭ್ರಮಗಳಾಚೆ ಉಳಿದು ಬರೆಹವನ್ನು ಸಂಭ್ರಮಿಸಿದವರು. ಅವರ ಆತ್ಮ ಕತೆಯನ್ನು ಓದುವುದೆಂದರೆ ಹೊಸ ಲೋಕವೊಂದಕ್ಕೆ ತೆರೆದುಕೊಂಡಂತೆ.
Reviews
There are no reviews yet.