ದಾರಿ

355.50

Add to Wishlist
Add to Wishlist
Email

Description

ಕುಸುಮಾ ಅವರ ಈ ವಿಶೇಷ ಕಾದಂಬರಿಯ ಬೆನ್ನುಡಿ ಹೀಗಿದೆ:
“ಕನ್ನಡ ಸಾಹಿತ್ಯದಲ್ಲಿ ಹಳ್ಳಿಯ ಬದುಕು ರಮ್ಯವಾಗಿಯೂ, ನಗರದ ಬದುಕು ರೂಕ್ಷವಾಗಿಯೂ ಚಿತ್ರಣಗೊಂಡಿರುವುದೇ ಹೆಚ್ಚು. ಆದರೆ ವಸ್ತುಸ್ಥಿತಿ ಹಾಗಿಲ್ಲ; ಅಥವಾ ಅದಕ್ಕೆ ವಿರುದ್ಧವಾಗಿಯೂ ಇಲ್ಲ. ಹಳ್ಳಿಗೆ ಎಲ್ಲ ಬಗೆಯ ರಾಜಕೀಯವೂ ನುಸುಳಿ, ಜನರ ಮುಗ್ಧತೆಯನ್ನು ನಾಶಮಾಡಿ, ಅವರ ಮಧ್ಯೆ ಪ್ರೀತಿ ಸೊರಗುತ್ತಿದೆ. ನಗರದಲ್ಲಿ ಪ್ರೀತಿಯ ಹಪಾಹಪಿ, ಒಂಟಿತನ, ಅನಾಥಪ್ರಜ್ಞೆ ಮುಂದುವರೆಯುತ್ತಲೇ ಇವೆ. ಯಾವುದನ್ನೂ ಕಪ್ಪುಬಿಳುಪಾಗಿ ಚಿತ್ರಿಸದೆ, ಅನುಭವದಿವ್ಯದಿಂದ ನಗರ ಮತ್ತು ಹಳ್ಳಿಗಳನ್ನು ಚಿತ್ರಿಸಿರುವುದು ಈ ಕಾದಂಬರಿಯ ಶ್ರೇಯಸ್ಸಾಗಿದೆ. ಗಂಡು-ಹೆಣ್ಣಿನ ನಡುವಿನ ಪ್ರೇಮದ ಬೀಸು ನಗರ-ಹಳ್ಳಿಗಳೆಲ್ಲವನ್ನೂ ಬೇಧಭಾವವಿಲ್ಲದೆ ಸ್ಪರ್ಶಿಸುತ್ತಲೇ ಹೋಗುತ್ತದೆ. ಒಬ್ಬರು ಮತ್ತೊಬ್ಬರಿಗಾಗಿ ಹಪಹಪಿಸುವ ಈ ಪವಿತ್ರ ಕ್ರಿಯೆಯಲ್ಲಿ ಎಲ್ಲ ಸೀಮೆಗಳೂ ಮಾಯವಾಗುತ್ತವೆ.
ಹಳ್ಳಿಯ ಬದುಕನ್ನು ಹಸನುಗೊಳಿಸಿ, ಜಾತಿ ಗೋಡೆಗಳನ್ನು ಕೆಡವಿ ಸಮಾನತೆಯನ್ನು ಸಾಧಿಸುವ ಕನಸನ್ನು ಬಹುತೇಕ ಯುವಕರು ಕಾಣುತ್ತಾರೆ. ಆದರೆ ಅದನ್ನು ಕಾರ್ಯಗತಗೊಳಿಸಲು ಇಳಿದಾಗ, ಇನ್ನಿಲ್ಲದ ಸಮಸ್ಯೆಗಳೂ ಮತ್ತು ಅಪಾಯಗಳೂ ಎದುರಾಗುತ್ತವೆ. ಹಳ್ಳಿಗಳಲ್ಲಿರುವ ಜಾತಿ, ವರ್ಗ, ರೂಢಿಯ ಕಪಿಮುಷ್ಟಿಗಳ ಚಕ್ರವ್ಯೂಹದೊಳಗೆ ನುಗ್ಗಿದರೆ ಉಸಿರುಗಟ್ಟಿದಂತಾಗುತ್ತದೆ. ಆದರೂ ದಿಕ್ಕೆಡದೆ ನುಗ್ಗುವ ಈ ಕಾದಂಬರಿಯ ಕಥಾನಾಯಕನ ಆದರ್ಶ ಬದುಕಿನ ಚಿತ್ರಣ ಸಾತ್ವಿಕ ಬಂಡಾಯದ ಶಕ್ತಿಯನ್ನು ಪರಿಚಯಿಸುತ್ತದೆ. ಆರಂಭದಲ್ಲಿ ಹಲವು ಸೋಲುಗಳನ್ನು ಕಂಡರೂ ನಿರಾಶನಾಗದೆ ಮುನ್ನುಗ್ಗುವ ಅವನ ಎದೆಗಾರಿಕೆ ಈ ಕಾದಂಬರಿಯ ಧನಾತ್ಮಕ ಅಂಶಗಳಲ್ಲಿ ಒಂದು.
ಹೆಣ್ಣು ಪಾತ್ರದ ಕ್ಲೀಷೆಗಳನ್ನು ನಿರಾಕರಿಸಿ ಚಿತ್ರಣಗೊಂಡ ಈ ಕಾದಂಬರಿಯ ಕಥಾನಾಯಕಿ ನಗರದಲ್ಲಿಯೇ ಹುಟ್ಟಿ ಬೆಳೆದವಳು ಮತ್ತು ಅತ್ಯಾಧುನಿಕ ವೃತ್ತಿಯಲ್ಲಿ ತೊಡಗಿದವಳು. ಹೆಣ್ಣು-ಗಂಡಿನ ಸಂಬಂಧವನ್ನು ಅತ್ಯಂತ ಪ್ರಬುದ್ಧವಾಗಿ ಕಾಣುವ ಅವಳ ಸ್ವಭಾವ ಮತ್ತು ಯಾವ ಮುಚ್ಚುಮರೆಯೂ ಇಲ್ಲದಂತೆ ಬದುಕನ್ನು ಎದುರಿಸುವ, ಪರಿಸ್ಥಿತಿಯನ್ನು ಎಲ್ಲ ಆಯಾಮದಿಂದಲೂ ಅರ್ಥ ಮಾಡಿಕೊಂಡು ಮನಸ್ಸಿಗೆ ಸರಿ ಎನ್ನಿಸಿದಂತೆ ನಡೆಯುವ ಆಕೆ ನಮ್ಮ ಕನ್ನಡ ಸಾಹಿತ್ಯಕ್ಕೆ ಹೊಸ ಪ್ರವೇಶವೆನ್ನಿಸುತ್ತದೆ. ರೂಕ್ಷವೆನ್ನಿಸಿದರೂ ತೀಕ್ಷ್ಣವಾದ ಅವಳ ಪ್ರಾಮಾಣಿಕತೆ ನಮ್ಮ ಮನಸ್ಸನ್ನು ಗೆಲ್ಲುತ್ತದೆ.
ಮೈಸೂರು-ಚಾಮರಾಜನಗರದ ಗ್ರಾಮ್ಯಭಾಷೆಯ ಸೊಗಡನ್ನು ಯಥೇಚ್ಛವಾಗಿ ಬಳಸಿಕೊಂಡ ಈ ಕೃತಿಯ ನಿರೂಪಣೆಯೂ ಓದಿನ ಗೇಯತೆಯನ್ನು ಹೆಚ್ಚಿಸುತ್ತದೆ.”

Reviews

There are no reviews yet.

Be the first to review “ದಾರಿ”

Your email address will not be published.