Description
ಆ ಮಾಯ್ಕಾರ ಮಾದಪ್ಪ ತನ್ನೇಳು ಎಪ್ಪತ್ತೇಳು ಮಲೆಯನ್ನು ಸೋಸಿ ಆರಿಸಿದ ಕೂಸಿಗೆ, ‘ಫನಶರಣ ತಿಪ್ಪೇಸ್ವಾಮಿಯ ಸೇವೆಗೆಂದು ಸ್ಪಲುಪದಿನ ಬಯಲುಸೀಮೆಗೆ ಹೋಗಿ ಬರುವಂಥವನಾಗು’ ಎಂದು ಮಾಡಿದ ಆದೇಸವನ್ನು ಆಗುಮಾಡಲು ನಮ್ಮ ನಾಡಿಗೆ ಬಂದವರು ಕೃಷ್ಣಮೂರ್ತಿ ಹನೂರು, ಚಾಮರಾಜನಗರದಿಂದ ನಾಯಕನಹಟ್ಟವರೆಗೆ ಸ್ವಂತದ್ದೊಂದು ಕಾಲುದಾರಿಯನ್ನು ಮಡಗಿಕೊಂಡಿರುವ ಹನೂರು ಅವರು ಆ ದಾರಿಗುಂಟ ಬರುವಾಗ
ಅಕ್ಕಪಕ್ಕ ಸಿಕ್ಕ ಕತೆಗಳನ್ನು ಮಂಟೀದಲ್ಲಮ ಪ್ರಭುಗಳು ದಯಪಾಲಿಸಿದ ಆಣಿಗೆ ಹಾಕಿಕೊಂಡು ಬರುತ್ತಾರೆ ಎಂಬ ಪ್ರತೀತಿ ಇದೆ, ನಾನೇ ಕಂಡ ಹಾಗೆ ಅವರ ಕಾಲುದಾರಿಯ ಒಂದು ಕವಲು ಸಿರಿಯಜ್ಜ ಗುಡಿಸಿಲೆಂಬ ಅರಮನೆಗೂ ಮತ್ತೊಂದು ಕವಲು ನಮ್ಮ ಪೂರ್ವೀಕ ಲೋಕೋಪಯೋಗಿ ಸಂತ ತಿಪ್ಪೇಸ್ವಾಮಿಯ ನಾಯಕನಹಟ್ಟಿಗೂ ಹೋಗಿ ಕೊನೆಮುಟ್ಟುತ್ತದೆ, ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಹಿರಿಯಣ್ಣನಂತಿರುವ ಹನೂರು ಎಂಬ ದೊಡ್ಡ ಸಂಪಿಗೆ
ಮರದಡಿಯಲ್ಲಿ ಅನಾದಿ ಕಾಲದಿಂದಲೂ ಅನೇಕ ಜನಪದ ಕಾವ್ಯಗಳೂ, ಕಥನಗಳೂ, ಕಾದಂಬರಿಗಳೂ ಜೋತಮ್ಮದೀರ ಯಾಸವನ್ನು ತಾಳಿಕೊಂಡು ಬಾಳಿಕೊಂಡು ಬಂದಿವೆ.
ನಮ್ಮ ಬಯಲುಸೀಮೆಗೆ ಬಂದು ತಿಪ್ಪೇಸ್ವಾಮಿಯಿಂದ ದೀಕ್ಷೆ ಪಡೆಯುವ ಕಾಲಕ್ಕೆ ಹನೂರು ಅವರು ‘ಈ ನಾಡು ನೀಡಿದ್ದನ್ನು ಇಲ್ಲೇ ಕತೆ ಮಾಡಿಕೊಟ್ಟು, ಸಿರಿಯಜ್ಜ ಕೈಯೆತ್ತಿ ಕೊಟ್ಟದ್ದನ್ನು ಹಸನು ಮಾಡಿ ರಾಶಿ ಹಾಕಿ, ಕುಂದನ ಕಾಯುವವರ ಕೊಡುಗೈದಾನದಲ್ಲಿ ಸಲ್ಲಿಸಬೇಕಾದ ಪಾಲನ್ನು ಅವರವರಿಗೆ ಸಲ್ಲಿಸಿ ಉಳಿದರ್ಧವನ್ನು ಉರಿವ ಜ್ಯೋತಿಗೆ ಸಲ್ಲಿಸಿ ಬಂದಂತೆ ಬರಿಗೈತಿ ಹೋಗ್ತಿನಿ ಜೀವವೇ’ ಎಂಬ ಪ್ರಮಾಣವಾಕ್ಯ ನುಡಿದಿದ್ದಾರಾದ್ದರಿಂದ ನಮ್ಮ ಬಯಲುಸೀಮೆಗೆ
ಮತ್ತಷ್ಟು ಕಥನಸಮೃದ್ಧಿ ಬಂದಂತಾಯ್ತು. ದೇವಮೂಲೆಯ ಮಳಿ ಎಂಬ ಈ ಸಂಕಲನ
ಕಥನರಾಸಿಯ ಸಿಖರ. ತಿಪ್ಪೇಸ್ವಾಮಿ ಸಿಖರದ ಮೇಲೆ ಕುಂತ ನವಿಲಿನಂತಿರುವ ಈ ಕಥಾ ಸಂಕಲನವು ನಮ್ಮ ಉತ್ತರದೇಸದಿಂದ ಹೋದ ಮಲೆಮಾದೇಶ್ವರ ಮಂಟೇಸ್ವಾಮಿಯರು ಕೃಷ್ಣಮೂರ್ತಿ ಹನೂರು ಮೂಲಕ ಕಳಿಸಿದ ಬಾಗಿನದಂತಿದೆ, ಬಯಲುಸೀಮೆಯ
ಸಿಸುಮಕ್ತಳಾದ ನಾವೆಲ್ಲ ನಿಮಗೆ ಋಣಿಗಳಾಗಿದ್ದೇವೆ.
– ಎಸ್ ನಟರಾಜ ಬೂದಾಳು
Reviews
There are no reviews yet.