Description
ಕರ್ನಾಟಕ ಸಂಗೀತದ ಅಪ್ರತಿಮ ಕಲಾವಿದರಾದ ಭೈರವಿ ಕೆಂಪೇಗೌಡರು ವಿಸ್ಸಂಶಯವಾಗಿ ಅತ್ಯುತ್ತಮ ಗಾಯಕರ ಸಾಲಿನಲ್ಲಿ ನಿಲ್ಲುತ್ತಾರೆ. ದುರಾದೃಷ್ಟವೆಂದರೆ ಅವರ ಹೆಸರು ಕರ್ನಾಟಕ ಸಂಗೀತದ ಇತಿಹಾಸದಲ್ಲಿ ಆಶ್ಚರ್ಯಕರವೆಂಬಂತೆ ಕಣ್ಮರೆಯಾಗಿರುವುದರ ಹಿಂದೆ ವ್ಯವಸ್ಥಿತ ಪಿತೂರಿಯಿದೆ. ಮೈಸೂರು ವಾಸುದೇವಾಚಾರ್, ಡಿ.ವಿ.ಜಿ. ಮುಂತಾದ ಕೆಲವೇ ಕೆಲವರು ಅತ್ಯಂತ ಸಂಕ್ಷಿಪ್ತವಾಗಿ ಭೈರವಿ ಕೆಂಪೇಗೌಡರನ್ನು ಕುರಿತು ಬರೆದಿರುವುದನ್ನು ಬಿಟ್ಟರೆ ಉಳಿದವರು ಆ ಬಗ್ಗೆ ಏನನ್ನೂ ಹೇಳಿರುವುದಿಲ್ಲ. ಹತ್ತೊಂಬತ್ತನೇ ಶತಮಾನದ ಉತ್ತರಾರ್ಧ ಮತ್ತು ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಅತ್ಯಂತ ಪ್ರಸಿದ್ಧ ಹಾಗೂ ಶ್ರೇಷ್ಠ ಗಾಯಕರಾಗಿದ್ದ ಗಾನಗಂದರ್ವ ಭೈರವಿ ಕೆಂಪೇಗೌಡರು ಮೈಸೂರು ಅರಸರು ಮತ್ತು ಸ್ವಾಮಿ ವಿವೇಕಾನಂದರ ಮೆಚ್ಚುಗೆ, ಪ್ರೀತಿ, ಅಭಿಮಾನಕ್ಕೆ ಪಾತ್ರರಾದ ಸಂತ-ಗಾಯಕ. ಬದುಕಿನ ಹೊಡೆತಗಳಿಂದ ನೊಂದ ಅವರು ಬೈರಾಗಿಯಂತೆ ಊರೂರು ಅಲೆಯುತ್ತ ಸಂಗೀತಪ್ರಿಯರ ಮುಂದೆ ಹೃದಯ ತುಂಬಿ ಹಾಡಿ ಜನಮನ ಸೂರೆಗೊಂಡವರು. ಇಂತಹ ಮಹಾನ್ ಗಾಯಕನನ್ನು ಕುರಿತು ಡಾ. ಎನ್. ಜಗದೀಶ್ ಕೊಪ್ಪ ಅವರು ಅಪಾರ ಪರಿಶ್ರಮದಿಂದ ಮಾಹಿತಿ ಸಂಗ್ರಹಿಸಿ ‘ಗಾನಗಂಧರ್ವ ಭೈರವಿ ಕೆಂಪೇಗೌಡ’ ಕೃತಿ ರಚಿಸಿದ್ದಾರೆ. ಆ ಮಹಾನ್ ಸಾಧಕನ ಜೀವನ ಚರಿತ್ರೆಯು ಸಂಗೀತಪ್ರಿಯರು ಮಾತ್ರವಲ್ಲ, ಎಲ್ಲರೂ ಓದಬೇಕಾದ ಕೃತಿ.
Reviews
There are no reviews yet.