Description
ಗಂಡು ಜೀವ, ಹೆಣ್ಣು ಭಾವ (ಮುಚ್ಚುಮರೆ ಇಲ್ಲದೆಯೇ ಬಿಚ್ಚಿಡುವೆ ಎಲ್ಲವನ್ನು)
ಭಾರತದ ಪ್ರಪ್ರಥಮ ಟ್ರಾನ್ಸ್ ಜೆಂಡರ್ ಪ್ರಿನ್ಸಿಪಾಲರ ಸಾದಾಸೀದಾ ಕತೆ
ಮೂಲ: ಮಾನವಿ ಬಂದೋಪಾಧ್ಯಾಯ
ಅನುವಾದ: ಬಿ ಎಸ್ ಜಯಪ್ರಕಾಶ ನಾರಾಯಣ
ಪುಸ್ತಕದ ಮೂಲ ಲೇಖಕಿಯ ಮಾತು
ನೀವು ಕಾರಿನಲ್ಲಿ ಹೋಗುತ್ತಿದ್ದೀರ ಎಂದಿಟ್ಟುಕೊಳ್ಳಿ, ದಾರಿಯಲ್ಲಿ ಕೆಂಪು ಸಿಗ್ನಲ್ ದೀಪ ಕಂಡಾಗ ಸಹಜವಾಗಿಯೇ ಕಾರನ್ನು ಹಸಿರು ದೀಪ ಬರುವವರೆಗೂ ನಿಲ್ಲಿಸುತ್ತೀರಿ. ಆ ಕ್ಷಣಗಳಲ್ಲಿ ಒಬ್ಬ ಹಿಜಡಾ ಚಪ್ಪಾಳೆ ತಟ್ಟಿಕೊಂಡು, ನಿಮ್ಮ ಕಾರಿನ ಬಳಿಗೆ ಭಿಕ್ಷೆ ಕೇಳಿಕೊಂಡು ಬರುತ್ತಾಳೆ. ಇಂತಹ ಸಂದರ್ಭ ಬಂದಾಗ ನಿಮ್ಮಲ್ಲಿ ಎಷ್ಟು ಜನ ಅಸಹನೆ, ಅಸಹ್ಯ ಭಾವ ಮತ್ತು ತಪ್ಪು ಗ್ರಹಿಕೆಗಳಿಂದ ಇನ್ನೊಂದು ಕಡೆಗೆ ಮುಖ ತಿರುಗಿಸಿಕೊಳ್ಳುವುದಿಲ್ಲ ಹೇಳಿ! ಸಾಮಾನ್ಯವಾಗಿ ಎಲ್ಲರೂ ಹೀಗೆ ಮಾಡುವವರೇ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ ಇದಕ್ಕೆ ಅಪವಾದವಷ್ಟೆ ಇದೇ ಜಾಗದಲ್ಲಿ ಹಿಜಡಾಗಳ ಬದಲು ದೈನ್ಯ ಭಾವನೆಯನ್ನೇ ಹೊತ್ತುಕೊಂಡು ಹೆಂಗಸೊಬ್ಬಳು ಕಂಕುಳಲ್ಲಿ ಒಂದು ಮಗುವನ್ನು ಎತ್ತಿಕೊಂಡು ತಿರುಪೆ ಎತ್ತಲು ಬಂದರೆ ನಿಮಗ್ಯಾರಿಗೂ ಇಂಥ ಜುಗುಪ್ಪೆ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ, ನೀವು ಸಂತೋಷದಿಂದಲೇ ನಿಮ್ಮ ಕೈಲಾದಷ್ಟನ್ನು ಕೊಡುತ್ತೀರಿ. ಹೀಗೇಕೆ? ಈ ಪ್ರಶ್ನೆಗೆ ನಾನು ಉತ್ತರ ಹೇಳುತ್ತೇನೆ. ಒಬ್ಬ ನಪುಂಸಕನನ್ನು ಕಂಡರೆ ನಿಮಗಾಗುವುದಿಲ್ಲ. ಏಕೆಂದರೆ, ಜನರ ಬಾಯಲ್ಲಿ ಹೀನಾಯವಾಗಿ ಕರೆಸಿಕೊಳ್ಳುವ ಮತ್ತು ಜನರು ತೀರಾ ತುಚ್ಛವಾಗಿ ಕಾಣುವ ಇಂಥವರನ್ನು ನೀವು ಶಿಶ್ನದ ಮೂಲಕವೋ, ಯೋನಿಯ ಮೂಲಕವೋ ಗುರುತಿಸಲಾರಿರಿ. ಹೀಗಾಗಿಯೇ ಒಬ್ಬ ಹಿಜಡಾ ನಿಮ್ಮ ಕಣ್ಣಿಗೆ ಬಿದ್ದರೆ ಸಾಕು, ಅಂಥವರನ್ನು ನೀವು ತುಂಬಾ ವಿಚಿತ್ರವಾದ ಪ್ರಾಣಿಯಂತೆ, ಅಪರಿಚಿತನಂತೆ, ಒಬ್ಬ ಕಳ್ಳನಂತೆ, ಯಾವುದೋ ಹೇಯವಾದ ಪ್ರಾಣಿಯಂತೆ, ಇವೆಲ್ಲಕ್ಕಿಂತ ಮಿಗಿಲಾಗಿ ಈ ಆಕೃತಿಯು ಮನುಷ್ಯನೇ ಅಲ್ಲವೆನ್ನುವಂತೆ ಕೆಟ್ಟದಾಗಿ ನೋಡುತ್ತೀರಿ.
Reviews
There are no reviews yet.