Sale!

ಕನ್ನಡ ಸಾಹಿತ್ಯ ವಾಗ್ವಾದಗಳು

270.00

Add to Wishlist
Add to Wishlist
Email

Description

ಲೇಖಕರು: ರಹಮತ್ ತರೀಕೆರೆ

ಪ್ರಕಾಶನ: ಅಭಿನವ, ಬೆಂಗಳೂರು

**********

ಅರಿಕೆ

ಇಪ್ಪತ್ತು ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಚಿಂತನೆಗೆ ಸಂಬಂಧಿಸಿ ಎರಡು ಪುಸ್ತಕಗಳನ್ನು ಪ್ರಕಟಿಸುವ ಪ್ರಸಂಗ ಬಂದಿತು. ಮೊದಲನೆಯದು- `ಮಾತು ತಲೆಯೆತ್ತುವ ಬಗೆ’. ಇದರಲ್ಲಿ ಸಾಹಿತ್ಯ ಜಿಜ್ಞಾಸೆಯ ಲೇಖನಗಳಲ್ಲಿ ಹುದುಗಿರುವ ಸಾಹಿತ್ಯ ತತ್ವಗಳನ್ನು ಶೋಧಿಸುವ ಪ್ರಯತ್ನವಿದೆ. ಎರಡನೆಯದು- `ಇಲ್ಲಿ ಯಾರೂ ಮುಖ್ಯರಲ್ಲ’. ಇದರಲ್ಲಿ ಆಧುನಿಕ ಸಾಹಿತ್ಯ ಕೃತಿಗಳಲ್ಲಿ ಅಂತರ್ಗತವಾಗಿರುವ ಸಾಹಿತ್ಯ ತತ್ವಗಳ ಹುಡುಕಾಟವಿದೆ. ಇವುಗಳ ತರುವಾಯ, ಸಾಹಿತ್ಯ ವಾಗ್ವಾದಗಳಲ್ಲಿರುವ ಸಾಹಿತ್ಯ ತತ್ವಗಳನ್ನು ವಿಶ್ಲೇಷಿಸುವ ಪ್ರಸ್ತುತ ಪುಸ್ತಕ ಪ್ರಕಟವಾಯಿತು. ಆಧುನಿಕ ಸಾಹಿತ್ಯ ಲೋಕದ ಈ ವಾಗ್ವಾದಗಳ ವಿಶೇಷತೆಯೆಂದರೆ, ಇವು ನಾಡಿನ ಸಾಮಾಜಿಕ ರಾಜಕೀಯ ಧಾರ್ಮಿಕ ಮಗ್ಗುಲುಗಳನ್ನೂ ಒಳಗೊಳ್ಳುತ್ತ, ಕರ್ನಾಟಕ ವಾಗ್ವಾದಗಳೂ ಆಗಿರುವುದು. ಹೀಗಾಗಿ ಈ ಪುಸ್ತಕವನ್ನು ವಾಗ್ವಾದಗಳ ಮೂಲಕ ಕಟ್ಟಲಾದ ಕನ್ನಡ ಸಾಹಿತ್ಯ ಚರಿತ್ರೆಯನ್ನಾಗಿ ಕೂಡ ನೋಡಬಹುದು. ಇದನ್ನು ಸಾಹಿತ್ಯ ಸಮಾಜ ರಾಜಕಾರಣಗಳಲ್ಲಿ ಆಸ್ಥೆಯುಳ್ಳ ಸರ್ವರೂ ಓದಬಹುದಾದ ಕರ್ನಾಟಕ ಸಂಸ್ಕೃತಿ ವಾಚಿಕೆಯನ್ನಾಗಿಸಲು ಯತ್ನಿಸಲಾಗಿದೆ.

ಈ ಪುಸ್ತಕಕ್ಕಾಗಿ ಸುಮಾರು ಒಂದು ಶತಮಾನದ ಅವಧಿಯಲ್ಲಿ (1917-2015) ಘಟಿಸಿದ ಪ್ರಾತಿನಿಧಿಕವಾದ ಹತ್ತು ವಾಗ್ವಾದಗಳನ್ನು ಆರಿಸಿಕೊಳ್ಳಲಾಗಿದೆ. ಪ್ರತಿಯೊಂದು ವಾಗ್ವಾದವನ್ನೂ ಐದು ಘಟ್ಟಗಳಲ್ಲಿ ವಿಂಗಡಿಸಿಕೊಂಡು ಚರ್ಚಿಸಲಾಗಿದೆ: ಅವೆಂದರೆ-ಹಿನ್ನೆಲೆ ವಿದ್ಯಮಾನಗಳ ಪೂರ್ವಪೀಠಿಕೆ, ಪೂರ್ವಪಕ್ಷದ ವಾದಮಂಡನೆ, ಪರವಿರುದ್ಧವಾಗಿ ಬಂದ ಪ್ರತಿಕ್ರಿಯೆ, ವಾದ ಪ್ರತಿವಾದಗಳ ಮಥನದಲ್ಲಿ ಸಾಹಿತ್ಯ ಸಮಾಜ ಸಂಸ್ಕೃತಿ ರಾಜಕಾರಣ ಮೇಲೆ ಮೂಡಿದ ಪ್ರಮುಖ ವಿಚಾರಗಳ ವಿಶ್ಲೇಷಣೆ ಹಾಗೂ ಈ ವಿಶ್ಲೇಷಣೆಯಲ್ಲಿ ಹೊಮ್ಮಿದ ಚಿಂತನೆಯ ವ್ಯಾಖ್ಯಾನ. ಮೊದಲನೇ ಅಧ್ಯಾಯವು ವಾಗ್ವಾದ ಪರಿಕಲ್ಪನೆಯ ನಿರ್ವಚನ ಮಾಡಿದರೆ, ಕೊನೆಯದು ವಾಗ್ವಾದಗಳಲ್ಲಿ ಮೇಲೆದ್ದ ಕೆಲವು ವಿಶಿಷ್ಟ ಸಮಸ್ಯೆಗಳನ್ನು ಚರ್ಚಿಸುತ್ತದೆ.

ನಾಡನ್ನು ವಿವಾದಗ್ರಸ್ತ ಮತ್ತು ಸಂವಾದಹೀನ ಕಾವಳವು ಆವರಿಸಿರುವ ಹೊತ್ತಲ್ಲಿ ಈ ಪುಸ್ತಕದ ಪರಿಷ್ಕೃತ ಆವೃತ್ತಿ ಹೊರಬರುತ್ತಿದೆ. ನಮ್ಮ ಆಜುಬಾಜಿನಲ್ಲಿ, ರಾಜಕಾರಣ ಸಮಾಜ ಧರ್ಮ ಭಾಷೆ ಸಾಹಿತ್ಯ ಅರ್ಥವ್ಯವಸ್ಥೆಯ ಕ್ಷೇತ್ರಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಮೇಲೆ ಪ್ರಜ್ಞಾವಂತರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಆದರೆ ಈ ಪ್ರಶ್ನೆಗಳು ಅರ್ಥಪೂರ್ಣ ವಾಗ್ವಾದ-ಸಂವಾದಗಳಾಗಿ ಬೆಳೆಯುತ್ತಿಲ್ಲ. ಬದಲಿಗೆ, ವಾದ-ಪ್ರತಿವಾದಗಳ ಮೂಲಕ ವಾಗ್ವಾದ-ಸಂವಾದವಾಗಿ ರೂಪುಗೊಳ್ಳಬೇಕಾದ ಸಂಗತಿಗಳು, ವಿಷಾದಕರ ವಿವಾದಗಳನ್ನು ಕೆರಳಿಸುತ್ತಿವೆ. ಈ ವಿವಾದಗಳು ಶಾಬ್ದಿಕ ಹಲ್ಲೆಗೆ ಪ್ರಚೋದಕವಾಗುತ್ತಿವೆ; ಪ್ರಾಣಬಲಿಯನ್ನೂ ಬೇಡುತ್ತಿವೆ. ಭಿನ್ನಮತ ಮತ್ತು ಚರ್ಚೆಗಳಿಲ್ಲದ ಸಮಾಜ, ಹಿಂಸೆಯನ್ನು ಸಹಜಗೊಳಿಸುತ್ತದೆ. ಇದೊಂದು ವೈಚಾರಿಕ ನಿರ್ವಾತ ಮತ್ತು ತಾತ್ವಿಕ ಜಡ ಪರಿಸರ. ತಮ್ಮ ಪ್ರಖರ ವೈಚಾರಿಕತೆಯಿಂದ ವಾಗ್ವಾದ ಹುಟ್ಟಿಸಬಲ್ಲ ಧೀಮಂತರ ಸಂಖ್ಯೆ ಕ್ಷೀಣಿಸುತ್ತಿದೆ. ದಿಟ್ಟವಾಗಿ ಮುಕ್ತವಾಗಿ ಚರ್ಚಿಸುವ ವಾತಾವರಣ ಉಡುಗಿ, ಅತಿಎಚ್ಚರದಿಂದ ಮಾತಾಡುವ ಮತ್ತು ಬರೆವ ಆತಂಕಿತ ಸನ್ನಿವೇಶ ಸೃಷ್ಟಿಯಾಗಿದೆ; ನಮ್ಮ ಹಿರೀಕರು ತಮ್ಮ ವಿಚಾರ ಪ್ರಚೋದಕ ಭಾಷಣ ಮತ್ತು ಬರೆಹಗಳಿಂದ ಚರ್ಚೆ-ಚಿಂತನೆಗಳನ್ನು ಉದ್ದೀಪಿಸುತ್ತಿದ್ದ ದಿನಗಳು ಮರಳಿ ಸಾಧ್ಯವೇ ಎಂಬ ಶಂಕೆ ಮೂಡುತ್ತಿದೆ. ಇದು ಸಂವಿಧಾನದ ಪೀಠಿಕೆಯಲ್ಲಿ ಘೋಷಿಸಿರುವ ಅಭಿವ್ಯಕ್ತಿ ಸ್ವಾತಂತ್ರ್ಯವೆಂಬ ಮೌಲ್ಯದ ಅಣಕ.

ಆದರೆ ಇಂತಹ ಬಿಕ್ಕಟ್ಟಿನಲ್ಲೇ ಸಂವಿಧಾನದ ಮೌಲ್ಯಗಳನ್ನೂ ಪ್ರಜಾಪ್ರಭುತ್ವವನ್ನೂ ಜೀವಂತ ಇರಿಸಬೇಕಿದೆ; ಇದಕ್ಕಾಗಿ ಪ್ರಶ್ನೆ ಎತ್ತುವ, ಧರ್ಮ ರಾಜಕಾರಣ ಸಾಹಿತ್ಯ ಸಮಾಜ ಮೊದಲಾದ ಕ್ಷೇತ್ರಗಳಲ್ಲಿ ವಾಗ್ವಾದ-ಸಂವಾದ ಮಾಡುವ ಕೆಲಸವನ್ನು ಜಾರಿ ಇಡಬೇಕಿದೆ; ನಮ್ಮ ಪೂರ್ವಿಕರು ಮತ್ತು ಸಮಕಾಲೀನರು ತಮ್ಮ ಛಾತಿ ವಿದ್ವತ್ತು ಕಾಳಜಿಗಳಿಂದ ಗೈದಿರುವ ವಾಗ್ವಾದ- ಸಂವಾದಗಳಿಂದ ಕಸುವನ್ನು ಪಡೆದುಕೊಳ್ಳಬೇಕಿದೆ; ಅವರ ಪರಿಮಿತಿಗಳನ್ನು ಅರಿತು ದಾಟಿ, ಹೊಸ ತಾತ್ವಿಕ ಚೌಕಟ್ಟುಗಳನ್ನು ಕಟ್ಟಿಕೊಳ್ಳಬೇಕಿದೆ.

*************************************

ಪರಿವಿಡಿ

ವಾದ-ವಿವಾದ-ವಾಗ್ವಾದ: ತಾತ್ವಿಕ ಚರ್ಚೆ

`ನಾವಲು’ ವಾಗ್ವಾದ (1917)

`ರುದ್ರ ನಾಟಕ’ ವಾಗ್ವಾದ (1941)

`ಶೂದ್ರ ತಪಸ್ವಿ’ ವಾಗ್ವಾದ (1944)

`ಅಶ್ಲೀಲ ಸಾಹಿತ್ಯ’ ವಾಗ್ವಾದ (1952)

`ಚೆನ್ನಬಸವ ನಾಯಕ’ ವಾಗ್ವಾದ (1956)

ದಲಿತ ದೃಷ್ಟಿಕೋನ ವಾಗ್ವಾದ (1980)

`ಬೂಸಾ ಸಾಹಿತ್ಯ’ ವಾಗ್ವಾದ (1973)

ಕರ್ನಾಟಕ ಸಂಸ್ಕೃತಿ ವಾಗ್ವಾದ (1978)

`ಶ್ರೇಷ್ಠತೆ’ಯ ವಾಗ್ವಾದ (1990)

`ಸಂಗ್ಯಾ ಬಾಳ್ಯಾ’ ವಾಗ್ವಾದ (2005)

ಕನ್ನಡ ವಾಗ್ವಾದಗಳ ವಿಶಿಷ್ಟ ಚಹರೆಗಳು

ಅಮೂಲ್ಯ ಪುಸ್ತಕ
Joined Jul 8, 2020

381 PRODUCTS ON STORE
Payment Gateway provided by Instamojo- See more at: https://amulyapustaka.myinstamojo.com/-6d086/p3486619/#sthash.JlxYyEb8.dpuf

Reviews

There are no reviews yet.

Be the first to review “ಕನ್ನಡ ಸಾಹಿತ್ಯ ವಾಗ್ವಾದಗಳು”

Your email address will not be published.