Description
ಮೂಲ: ಒರ್ಹಾನ್ ಪಮುಕ್ ಅನು: ಓ.ಎಲ್. ನಾಗಭೂಷಣಸ್ವಾಮಿ
ಪ್ರಕಾಶನ: ಅಭಿನವ, ಬೆಂಗಳೂರು
ISBN: 978-81-943440-1-8
………………..
ಪಮುಕ್ ನಿಪುಣ ಕಥೆಗಾರ ಹೌದಾದರೂ ಕೇವಲ ಕಥೆಯನ್ನು ಆಕರ್ಷಕವಾಗಿ ಹೇಳುವುದಷ್ಟೇ ಅವನ ಉದ್ದೇಶವಲ್ಲ. ಪಮುಕ್‍ನ ಕಾದಂಬರಿಗಳು ಪೂರ್ವ ಮತ್ತು ಪಶ್ಚಿಮದ ಸಂಸ್ಕøತಿಗಳ ತಿಕ್ಕಾಟ, ಮನುಷ್ಯ ಸಂಬಂಧಗಳ ಜಟಿಲ ಹೆಣಿಗೆ, ಆಧುನಿಕತೆ ಮತ್ತು ಪರಂಪರೆಯ ಪ್ರಶ್ನೆಗಳನ್ನು ಎತ್ತುತ್ತವೆ. ಚರಿತ್ರೆ, ಪುರಾಣ, ಕತೆ ನಡೆಯುವ ಕಾಲದ ರಾಜಕೀಯದ ಆಯಾಮಗಳೂ ಸೇರಿಕೊಳ್ಳುತ್ತವೆ. ದಿನನಿತ್ಯದ ಸಾಮಾನ್ಯ ಬದುಕಿನಲ್ಲಿ ನಾವು ನೋಡುವ ಆದರೆ ಗಮನಿಸದ ವಸ್ತುಗಳ ಅರ್ಥಪೂರ್ಣ, ಔಚಿತ್ಯಪೂರ್ಣ ವರ್ಣನೆ ಇರುತ್ತದೆ. ಪ್ರತಿಯೊಂದು ಸನ್ನಿವೇಶದ ಭೌತಿಕ ವಾಸ್ತವದ ವಿವರಗಳು ಇರುತ್ತವೆ. ಪಮುಕ್ ಕೇವಲ ವಾಸ್ತವತಾವಾದಿಯಲ್ಲ, ವಿವರಗಳ ಮೂಲಕ, ಬೇರೆ ಬೇರೆ ಸ್ವಭಾವದ ಪಾತ್ರಗಳ ಕಣ್ಣಿಗೆ, ಮನಸಿಗೆ ಲೋಕ ಹೇಗೆ ಕಾಣುತ್ತದೆ ಅನ್ನುವುದನ್ನು ತೋರುವ ಮೂಲಕ, ಭಾಷೆಯಲ್ಲೇ ಬೇರೆ ಇನ್ನೊಂದು ಕಾಲ್ಪನಿಕ ವಾಸ್ತವವನ್ನು ನಿರ್ಮಿಸುತ್ತಾನೆ. ಆಟವಾಡುತ್ತ ಮಕ್ಕಳು ಪಡುವ ಖುಷಿಗೆ ಸಮಾನವಾದ ಖುಷಿಯನ್ನು ಬರೆಯುವಾಗ ಅನುಭವಿಸುತ್ತ ಓದುಗರಿಗೂ ಅಂಥ ಸಂತೋಷ ಕೊಡುತ್ತಾನೆ. ಕಾದಂಬರಿ ಪ್ರಕಾರದಲ್ಲಿ ಏನೇನು ಸಾಧ್ಯ ಅನ್ನುವುದನ್ನು ತೋರಿಸಿಕೊಡುವ ಲೇಖಕ ಪಮುಕ್.
ಪಮುಕ್‍ನ ಮಿಕ್ಕ ಕೃತಿಗಳಂತೆ `ಕೆಂಪು ಮುಡಿಯ ಹೆಣ್ಣು’ ಕಾದಂಬರಿಯಲ್ಲೂ ಇಸ್ತಾಂಬುಲ್ ನಗರದ ವಾಸ್ತವ ವರ್ಣನೆ ಇದೆ. ಆದರೆ ರಸ್ತೆ, ಚೌಕ, ಮೊಹಲ್ಲ ಇತ್ಯಾದಿಗಳೆಲ್ಲ ಕಥೆ ಓದುವಾಗಲೇ ಸ್ಪಷ್ಟವಾಗುತ್ತದೆ. ಆ ನಗರವನ್ನು ಬಲ್ಲವರಿಗೆ ಕಥೆಯ ಭಾವಕ್ಕೂ ಊರಿನ ವಾಸ್ತವಕ್ಕೂ ಇರುವ ಸಂಬಂಧ ಹೊಸಕೋನದಿಂದ ಕಂಡೀತು. ಆದರೆ ಅವೆಲ್ಲ ವಿವರಗಳನ್ನೂ ಅನುಬಂಧದಲ್ಲಿ ನೀಡಿದರೆ ಓದಿನ ಸುಖಕ್ಕೆ ಅಡ್ಡಿಯಾದೀತು ಎಂದು ನೀಡಿಲ್ಲ. ಪಮುಕ್‍ನ ವಿಷಯ ವ್ಯಾಪ್ತಿಯ ಸೂಚನೆ ಒಂದಿಷ್ಟು ಸಿಗಲೆಂದು ಈ ಕಾದಂಬರಿಯಲ್ಲಿ ಉಲ್ಲೇಖಗೊಂಡಿರುವ ಚಾರಿತ್ರಿಕ ವ್ಯಕ್ತಿ, ಸಂದರ್ಭ, ಸಾಹಿತ್ಯ ಕೃತಿ ಮತ್ತು ಕಲಾವಿದರನ್ನು ಕುರಿತ ಅತ್ಯಂತ ಕಿರಿದಾದ ಟಿಪ್ಪಣಿಯನ್ನು ಅನುಬಂಧದಲ್ಲಿ ನೀಡಿದ್ದೇನೆ. ಹಾಗೆಯೇ ಪಮುಕ್‍ನ ಮುಗ್ಧ-ಪ್ರಬುದ್ಧ ಹೊರತುಪಡಿಸಿ ವಿವಿಧ ಸಂದರ್ಶನಗಳಲ್ಲಿ ಆತ ಕಾದಂಬರಿ ಕಲೆಯ ಬಗ್ಗೆ ಹೇಳಿರುವ ಮಾತುಗಳ ಸಾರಾಂಶವನ್ನು, ಈ ಕಾದಂಬರಿ ಕುರಿತ ಕೆಲವು ಕುತೂಹಲದ ಸಂಗತಿಗಳನ್ನು ಅನುಬಂಧದಲ್ಲಿ ಸೇರಿಸಿದ್ದೇನೆ. ಸಾಹಿತ್ಯದಲ್ಲಿ ಗಂಭೀರ ಆಸಕ್ತಿ ಉಳ್ಳವರಿಗೆ ಇದರಿಂದ ನೆರವಾಗುವುದೆಂದು ನಂಬಿದ್ದೇನೆ.
-ಓ.ಎಲ್. ನಾಗಭೂಷಣಸ್ವಾಮಿ
(ಅರಿಕೆಯಿಂದ)
Reviews
There are no reviews yet.