Description
ಹಲವು ವರ್ಷಗಳ ಕಾಲ ಬೇಂದ್ರೆಯವರ ಜೀವನ ಮತ್ತು ಬರವಣಿಗೆಯನ್ನು ಬಹಳ ಹತ್ತಿರದಿಂದ ಬಹಳ ಪ್ರೀತಿಯಿಂದ ನೋಡಿದ ವಸಂತ ದಿವಾಣಜಿ ಅವರು ಈ ವಿಶಿಷ್ಟವಾದ ಕೃತಿಯನ್ನು ಕೊಟ್ಟಿದ್ದಾರೆ. ಇಲ್ಲಿ ಕವಿ ಮತ್ತು ರಸಿಕರ ನಡುವಿನ ಅರ್ಥಪೂರ್ಣ ಸಂವಾದವಿದೆ. ಬೇರೆಲ್ಲಿಯೂ ಸಿಗಲಾರದ ನೆನಪುಗಳ ಸಂಕಲನವು ಕವಿಹೃದಯದ ಆಗುಹೋಗುಗಳಿಗೆ ಕನ್ನಡಿ ಹಿಡಿದಿದೆ. ಎಚ್ಚರದ ಪ್ರತಿ ಕ್ಷಣದಲ್ಲಿಯೂ ಕವಿಯಂತೆಯೇ ಲೋಕವನ್ನು ಕಂಡ, ಹಾಗೆಯೇ ಕಂಡರಿಸಿದ ಬೇಂದ್ರ ಅವರನ್ನು ದಿವಾಣಜಿಯವರ ಸೂಕ್ಷ್ಮಮತಿಯು ಗೌರವ ಮತ್ತು ವಿಮರ್ಶಾತ್ಮಕ ದೂರಗಳಿಂದ ನೋಡಿದೆ.
ಬೇಂದ್ರೆಯವರೇ ಹೇಳಿದ ಹತ್ತು ಹಲವು ವಿಚಾರಗಳು ಮತ್ತು ಅವರ ಜೀವನದಿಂದ ಆಯ್ದು ತೆಗೆದ ಘಟನೆಗಳು ಪುಸ್ತಕದ ಮೌಲ್ಯವನ್ನು ಹೆಚ್ಚಿಸಿವೆ.
ಬೇಂದ್ರೆಯವರ ಕವಿತೆಯನ್ನು ಗ್ರಹಿಸಬೇಕಾದ ಹಲವು ಬಗೆಗಳನ್ನು, ಕವಿಯ ಮೂಲಕ ಮತ್ತು ಸ್ವಂತ ಪ್ರತಿಭೆಯ ಮೂಲಕ ಕಂಡುಕೊಂಡ ಲೇಖಕರು ಒಟ್ಟಂದದ ವಿಶ್ಲೇಷಣೆ ಮತ್ತು ಹಲವು ಕವಿತೆಗಳ ಓದಿನ ಮೂಲಕ ತೋರಿಸಿಕೊಟ್ಟಿದ್ದಾರೆ. ಬೇಂದ್ರೆಯವರ ಮಿತಿಗಳನ್ನು ಗುರುತಿಸಿಯೂ ಅವರ ಕಾವ್ಯದ ಅಖಂಡ ಶಕ್ತಿಯನ್ನು ತೆರೆದು ತೋರಿಸುವುದು ಮೆಚ್ಚುವುದು ಇದರ ಹಿರಿದು.
ಬೇಂದ್ರೆಯವರ ಬಗ್ಗೆ ಈವರೆಗೆ ಬಂದಿರುವ ವಿಮರ್ಶೆಯ ವಿಮರ್ಶೆ ಈ ಪುಸ್ತಕದ ಇನ್ನೊಂದು ನೆಲೆ. ನೇರವಾಗಿ ಹೆಸರಿಸದಿದ್ದರೂ ಕನ್ನಡದ ಪ್ರಮುಖ ಬೇಂದ್ರೆ ವಿಮರ್ಶಕರ ವಿಧಾನ, ಶಕ್ತಿ ಮತ್ತು ಪರಿಮಿತಿಗಳ ಸೂಕ್ಷ್ಮವಾದ ಪರಿಶೀಲನೆ ಇಲ್ಲಿದೆ.
ಗತ ಪ್ರಸ್ತುತಗಳ ಸೀಮಿತಗಳನ್ನು ಮೀರಿದ ತಾತ್ವಿಕಸಂಗತಿಗಳ ನೋಟವು ಕವಿಗೆ ಸಾಧ್ಯ. ಆದ್ದರಿಂದಲೇ ಅವನನ್ನು ಕ್ರಾಂತದರ್ಶಿಯೆಂದು ಕರೆಯುತ್ತಾರೆ. ಬೇಂದ್ರೆಯವರು ನೀಡಿರುವ, ಅಂಥ ದರ್ಶನದ ಹೊಳಹುಗಳನ್ನು ಈ ಪುಸ್ತಕವು ಅರಸುತ್ತದೆ.
ಆರಾಧನೆ ಅಥವಾ ನಿರಾಕರಣೆಗಳೆಂಬ ಅತಿರೇಕಗಳನ್ನು ಬದಿಗಿಟ್ಟು ಕವಿತೆಯನ್ನು ಅನುಸಂಧಾನ ಮಾಡುವ ‘ಕ್ರಾಂತದರ್ಶನ’ ಇಂಥ ಪ್ರಯತ್ನಗಳಿಗೆ ಮಾದರಿ.
(ಬೆನ್ನುಡಿಯಿಂದ)
Reviews
There are no reviews yet.