Description
ಆಧುನಿಕ ಚೀನಾ ನಿರ್ಮಾಣದಲ್ಲಿ ಅತ್ಯಂತ ಮುಖ್ಯ ಕ್ರಾಂತಿಯಾದ 1919 ಮೇ 4ರ ಚಳವಳಿಯ ಮುನ್ನಾ ವರ್ಷದಲ್ಲಿ ಲು ಷುನ್ ತನ್ನ ಮೊದಲ ಕಥೆ `ಹುಚ್ಚನ ದಿನಚರಿ’ಯನ್ನು ಬರೆದು, ಊಳಿಗಮಾನ್ಯ ಶಕ್ತಿಗಳ ವಿರುದ್ಧ ನೇರ ಯುದ್ಧ ಸಾರಿದ. ಈ ಕಥೆ ಚೀನೀ ಸಾಹಿತ್ಯಕ್ಕೆ ಒಂದು ಹೊಸ ತಿರುವನ್ನೂ ಕೊಟ್ಟಿತು; ಚೀನೀ ಸಾಹಿತ್ಯ ಇತಿಹಾಸದಲ್ಲಿ ಆಧುನಿಕತೆಯ ಹೊಸ ಅಧ್ಯಾಯವನ್ನೇ ತೆರೆಯಿತು.
ಲು ಷುನ್, ಸಾಮ್ರಾಜ್ಯಶಾಹಿಯ ದನಗಾಲಿನ ತುಳಿತದಡಿಯಲ್ಲಿ ನೋವುಂಡಿದ್ದ; ದಿಗ್ಬ್ರಮೆಗೊಂಡಿದ್ದ; ಪ್ರತಿಭಟನೆಯ ಧ್ವನಿ ಎತ್ತಿದ್ದ. ಹಾಗೆಯೇ ತುಳಿತದ ವಿವಿಧ ಸ್ವರೂಪಗಳನ್ನು ಅರ್ಥ ಮಾಡಿಕೊಂಡಿದ್ದ; ಅದರ ವಿರೋಧಾಭಾಸಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದ; ಅವನತಿಯ ಕಾರಣಗಳನ್ನು ವಿವೇಚಿಸಿದ್ದ- ಈ ಎಲ್ಲದರ ಫಲವಾಗಿ ರೂಪಗೊಂಡ, ಆತನ ಬರವಣಿಗೆಯ ಪ್ರಧಾನ ಗುಣವಾದ ವ್ಯಂಗ್ಯಕ್ಕೆ ವಿಶಿಷ್ಟವಾದ ಶಕ್ತಿ ಇದೆ; ಪ್ರಚಂಡ ಮೊನಚಿದೆ. ಈ ವ್ಯಂಗ್ಯ ಆತನ ಎಲ್ಲ ಬರವಣಿಗೆಗಳಲ್ಲೂ ಧಾರಾಳವಾಗಿ ಕಾಣಿಸಿಕೊಂಡಿದೆ; ಊಳಿಗಮಾನ್ಯ ಪ್ರಭುಗಳನ್ನು ಚುಚ್ಚಿ ಚುಚ್ಚಿ ಬೆಚ್ಚಿಬೀಳಿಸಿದೆ.
ಲುಷುನ್ ಈ ಕತೆಗಳನ್ನು ಬರೆದು ಸರಿಯಾಗಿ ಒಂದು ಶತಮಾನ ಕಳೆದುಹೋಗಿದೆ. ನಿರ್ದಿಷ್ಟ ಉದ್ದೇಶಕ್ಕಾಗಿ ಅವನು ಬಳಸುತ್ತಿದ್ದ ಹಾಸ್ಯ, ವ್ಯಂಗ್ಯ, ವಿಡಂಬನೆ, ಗೇಲಿ ಅವನ ಕಥನ ಶೈಲಿಯ ಭಾಗವಾಗಿ ಬಹಳ ಪರಿಣಾಮಕಾರಿಯಾಗಿವೆ. ಸಾಹಿತ್ಯದ ಹೊಳಪನ್ನು ಹೆಚ್ಚಿಸುವಂಥ ಪ್ರಯೋಗಗಳೂ ಇಲ್ಲಿನ ಗದ್ಯ ಕವಿತೆಗಳಲ್ಲಿವೆ. ‘ಆಹ್ ಕ್ಯೂನ ನಿಜವಾದ ಕತೆ’ ಲುಷುನ್ ಕ್ರಾಂತಿಯನ್ನು ಪರಿಭಾವಿಸಿದ ರೀತಿಯನ್ನು ಹೇಳುವಂತಿದೆ. ‘ಸುಖೀ ಸಂಸಾರ’ ಎನ್ನುವ ಕತೆ ಆಗಿನ ಚೀನಾದ ತೀರ ಸಾಮಾನ್ಯ ಕುಟುಂಬದ ನೋವಿನ ಕತೆಯನ್ನು ದಾಖಲಿಸುವಂತಿದೆ. ‘ಖಡ್ಗ ತಯಾರಿಸಿದ್ದು’ ಎನ್ನುವ ಕತೆ ಲುಷುನ್ ಗ್ರಹಿಕೆ ಮತ್ತು ಕಥನ ಪ್ರತಿಭೆಗೆ ಸಾಕ್ಷಿಯಾಗಿದೆ. ಸಾಹಿತ್ಯಾಸಕ್ತರನ್ನು ಈ ಕತೆಗಳು ಸೆಳೆಯುತ್ತವೆ.
Reviews
There are no reviews yet.