Sale!

ಪ್ರಿಯೇ ಚಾರುಶೀಲೆ

(1 customer review)

266.00

Add to Wishlist
Add to Wishlist
Email

1 review for ಪ್ರಿಯೇ ಚಾರುಶೀಲೆ

  1. Abhishek S

    ||• ಪ್ರಿಯೇ ಚಾರುಶೀಲೆ •||

    5/5

    “ಸಾಮಾನ್ಯವಾಗಿ ಹೊಸ ಬರಹಗಾರರ ಪುಸ್ತಕಗಳನ್ನು ಓದುವಾಗ ಹಳೆ ಬರಹಗಾರರನ್ನೇ ಓದಿದಂತೆ ಅನಿಸುತ್ತದೆ. ಬೇಂದ್ರೆ ಅಜ್ಜನದ್ದೋ, ಬೆಳಗೆರೆಯವರದ್ದೋ, ಭೈರಪ್ಪನವರದ್ದೋ ಇನ್ನೊಬ್ಬ ಬರಹಗಾರರದ್ದೋ ಶೈಲಿ ನುಸುಳಿ ಹೋಗಿರುತ್ತದೆ”

    ನಾಗರಾಜ ವಸ್ತಾರೆ ಎಂಬ ಅದ್ಭುತ ಲೇಖಕ ಈ ಮೇಲಿನ ಥಿಯರಿಗೆ ಹೊರತಾಗಿದ್ದಾರೆ. ಅವರದ್ದೇ ವಿಭಿನ್ನ ಶೈಲಿಯನ್ನು ಬಳಸಿ ಓದುಗರನ್ನು ಬೆಕ್ಕಸ ಬೆರಗಾಗಿಸುತ್ತಾರೆ‌. ಈ ಪುಸ್ತಕ ೨೦೧೯-೨೦ರ ಪ್ರಸ್ತುತತೆ, ಕಂಗ್ಲೀಷ್, ಭಾಷಾ ಪ್ರಯೋಗ, ವಸ್ತು ವೈಶಿಷ್ಟ್ಯ, ನಿರೂಪಣೆ ಎಲ್ಲದರಲ್ಲೂ ನವೀನ ಎನಿಸುತ್ತದೆ. ಹೆಸರೇ ಎಷ್ಟು ಮೋಹಕ – “ಪ್ರಿಯೇ… ಚಾರುಶೀಲೆ”. ಹೆಸರಿನಿಂದಲೇ ಒಂದು ಅಪರಿಚಿತ ಮುಗುಳ್ನಗು ಮೂಡಿಸಬಲ್ಲ ಪುಸ್ತಕದ ಒಡಲು ಇನ್ನೂ ಮೋಹಕ!!!

    ಪುಸ್ತಕಗಳನ್ನು ಮುಖಪುಟ ನೋಡಿ ನಿರ್ಧರಿಸಬೇಡಿ ಎಂಬ ಮಾತು ಚಾಲ್ತಿಯಲ್ಲಿದೆ. ಹಲಬಾರಿ ಇದು ನಿಜವೂ ಕೂಡ. ಹಾಗೇ ಕೇವಲ ಪುಸ್ತಕದ ಹೆಸರಿಗೆ ಆಕರ್ಷಿತನಾಗಿ ಈ ಪುಸ್ತಕ ಕೊಂಡುಕೊಂಡೆ. ಪುಸ್ತಕ ನಿರಾಸೆ ಮಾಡಲಿಲ್ಲ!!! ಪುಸ್ತಕದ ಒಡಲು ಹೀಗೆ ಇಷ್ಟೇ ಎಂದು ಬರೆಯುವುದು ಸುಲಭವಲ್ಲ‌. ಅಪರಿಚಿತ ಜಾಗದಲ್ಲಿ ಭೇಟಿಯಾಗುವ ಅಪರಿಚಿತ ಜೀವಗಳು ಬೆರೆಯುವ, ಮೊರೆಯುವ, ಕರೆಯುವ, ತೆರೆಯುವ, ಮುರಿಯುವ ಸುಂದರ ಕಥಾಹಂದರವನ್ನು ಹೊತ್ತು ಪ್ರಿಯೇ ಚಾರುಶೀಲೆ ಸಾಗುತ್ತದೆ.

    ಇಲ್ಲಿ ಹೆಚ್ಚು ಪಾತ್ರಗಳ ಗೌಜು ಗೊಂದಲ ಗದ್ದಲಗಳಿಲ್ಲ, ಈಗಾಗಲೇ ರಾಶಿ ರಾಶಿ ಬರೆದಿಟ್ಟಿರುವ ಜಾತಿ ಮತಗಳಿಲ್ಲ, ಮತ್ತದೇ ಪ್ರೀತಿ ಪ್ರೇಮ ‌ಊಹೂಂ ಅದು ಇಲ್ಲ. ಇಡೀ ಪುಸ್ತಕವೇ ಒಂದು ಕೌತುಕ. ಓದುಗನೆದೆಗೆ ತೋಂತನನಗಳ ಸುರಿದು ತಾನು ಬರಿದಾಗಿ ಓದುಗನಲೊವನು ಸುರಿದುಕೊಳ್ಳುವ ಮನಮೋಹಕ ಕಾದಂಬರಿ ಪ್ರಿಯೇ ಚಾರುಶೀಲೆ!!!

    ಎರಡೇ ಮುಖ್ಯ ಪಾತ್ರಗಳು ಸಮರ್ಥವಾಗಿ ಇಡೀ ಕಾದಂಬರಿಯನ್ನು ಹೊತ್ತಿವೆ. ಅವರದೇ ನಿರೂಪಣೆ, ನವಿರು ಸಂಭಾಷಣೆ.‌ ಅವನು ಮಾತಿಗೊಮ್ಮೆ ಮೀಸೆಯ ಮೇಲೆ ಕೈ ಇರಿಸಿ ನಕ್ಕರೆ ಇವಳು ಘಳಿಗೆಗೊಮ್ಮೆ ಅದನ್ನು ನೋಡಿ ನಾಚುವ ಹಸಿಬಿಸಿ ಭಾವ. ಅವಳು ಮತ್ಸ್ಯ ಕನ್ಯೆಯೇನೋ ಎಂಬ ಮಟ್ಟಿಗಿನ ಅವನ ಭ್ರಮಾ ಭಾವ, ಹೀಗೆ ಹಲವಾರು ಸುಂದರ ವೈಶಿಷ್ಟ್ಯ ವೈಚಿತ್ರ್ಯಗಳು ಓದುಗನಿಗೆ ಆಪ್ಯಾಯ ಭಾವವನ್ನು ‌ಉಳಿಸುತ್ತವೆ.

    ಪುಸ್ತಕಗಳು ಮನಸಿನಲ್ಲುಳಿಯಬೇಕು, ಕಾಡಬೇಕು, ಎಡಬಿಡದೆ ಯೋಚನೆಗೀಡು ಮಾಡಬೇಕು ಎಂಬ ಸಿದ್ದಾಂತವಿರಿಸಿಕೊಂಡು ಓದುವವರಲ್ಲಿ ನಾನು ಒಬ್ಬ. ಹಾಗಾಗಬೇಕು ಎಂದರೆ ವಿಷಯ ಗಹನವಾಗಿರಬೇಕು ಎಂಬ ಪೂರ್ವಾಗ್ರಹವನ್ನು ನನ್ನೊಳಗೆ ಸೃಷ್ಟಿಸಿಕೊಂಡಿದ್ದೆ. ಪ್ರಿಯೇ ಚಾರುಶೀಲೆಯ ವಿಷಯ ಗಹನವೋ ಅಲ್ಲವೋ ಎಂಬುದು ಪ್ರತಿ ಓದುಗನ‌ ತರ್ಕಕ್ಕೆ ಸೀಮಿತವಾಗಲಿದೆ. ಆದರೆ ಸೀಮಾತೀತವಾಗಿರುವುದು ಕಾದಂಬರಿ ಓದುವಾಗಿನ ಅನುಭವ. ಪುಸ್ತಕ ಮನಸಿನಲ್ಲುಳಿಯುತ್ತದೆ, ಕಾಡುತ್ತದೆ. ಸಿಹಿಯಾಗಿ… ನವಿರಾಗಿ… ಹಸಿರಾಗಿ… ಬೆಳಕಾಗಿ… ಬದುಕಾಗಿ… ಪ್ರಿಯೇ ಚಾರುಶೀಲೆ ಎಂಬ ಹೆಸರು ಸೃಷ್ಟಿಸಿದ ಮುಗುಳ್ನಗು ಪುಸ್ತಕದುದ್ದಕ್ಕೂ ಮರೆಯಾಗುವುದಿಲ್ಲ. ಅವರೇ ನಾವೋ, ನಾವೇ ಅವರೋ, ಅವರು ನಾವುಗಳಿಗೆಲ್ಲ, ನಾವು ಅವರುಗಳಿಗೆಲ್ಲಾ ಇದುವೇ ತಾವೋ. ಹಾ! ದಿಸ್ ಬುಕ್ ಇಸ್ ಬೇಯಾಂಡ್ ಅವರ್ ಇಮ್ಯಾಜಿನೇಷನ್!!! ಇರಲಿ…

    ಅಲ್ಲಲ್ಲಿ ಬರುವ ಕವಿ ಜಯದೇವನ ಅಷ್ಟಪದಿಗಳು ಪುಸ್ತಕವನ್ನು ಇಂದು ಚಂದಗಾಣಿಸಿವೆ. ಪುರಿಯ ಜಗನ್ನಾಥನ ಸನ್ನಿಧಿಯಲ್ಲಿ ಜರುಗುವ ಈ ಕಥೆಯೊಂದಿಗೆ ಜಯದೇವನ ಕವಿತೆಗಳಿದ್ದರೆ ಓದುಗ ಸಮ್ಮೋಹಿತನಾಗದೇ ಇರಲಾರ. ಜೊತೆಗೆ ಇತಿಹಾಸದ‌ ಪರಿಚಯವೂ ಇದೆ. ಬೋರು ಹಿಡಿಸದಷ್ಟು. ಒಟ್ಟಿನಲ್ಲಿ ಎಲ್ಲವೂ ಎಷ್ಟು ಬೇಕೋ ಅಷ್ಟು. ಅಷ್ಟೇ. ಅಪರಿಚಿತ ಜಾಗವಾದ ಪುರಿಯಲ್ಲಿ ಸಿಕ್ಕ ಅಪರಿಚಿತ ಜೀವಗಳಾವುವು? ಅವರ ಕಥನವೇನು? ಪುಸ್ತಕದ ಒಡಲಾದರೂ ಏನು? ಊಹಿಸಬೇಡಿ. ನಿಮ್ಮ ಊಹೆ ತಪ್ಪಾಗಿರಲಿದೆ. ಇದೊಂದು ಪುಸ್ತಕವನ್ನು ಓದಿ. ಹೊಸತನಕ್ಕಾಗಿ, ಪ್ರಸ್ತುತತೆಗಾಗಿ!!!

    ಶುಭವಾಗಲಿ…

    ಅಭಿ…

Add a review

Your email address will not be published.