Description
ಭಾರತೀಯ ವಾಙ್ಮಯ ಪರಂಪರೆ: ಒಂದು ಪ್ರವೇಶಿಕೆ
ಸಂಪಾದಕರು: ನರಹಳ್ಳಿ ಬಾಲಸುಬ್ರಹ್ಮಣ್ಯ
ಮೊದಲನೆಯ ಮುದ್ರಣ: 2021
……………..
ಭಾರತೀಯ ವಾಙ್ಮಯ ಪರಂಪರೆ ಬಹುಮುಖಿಯಾದುದು.ವಿಶೇಷ ಚಿಂತನೆಗಳ ಮೂಲಕ ರೂಪುಪಡೆದ ಈ ಪರಂಪರೆಯನ್ನು ವೈದಿಕ-ಅವೈದಿಕ ಎನ್ನುವ ಪರಿಭಾಷೆಯ ಮೂಲಕ ಕಂಡುಕೊಳ್ಳುತ್ತಿದ್ದೇವೆ. ನಮ್ಮ ಸಂಸ್ಕೃತಿಯು ನಂಬಿಕೆ, ಚಿಂತನೆ, ಸಂಘರ್ಷ ಮತ್ತು ಸಾಮರಸ್ಯದ ಮೂಲಕವೇ ಬೆಳೆಯುತ್ತಾ ಬಂದಿರುವುದರಿಂದಯಾವುದು ವೈದಿಕ-ಅವೈದಿಕ? ಎನ್ನುವುದನ್ನು ಕಂಡುಕೊಳ್ಳುವುದು ಕಷ್ಟ. ಇಂಥ ಸಂಕೀರ್ಣ ಸಮಸ್ಯೆಗಳನ್ನು ಬಿಡಿಸುವಲ್ಲಿ ಇಲ್ಲಿಯ ಲೇಖನಗಳು ನೆರವಾಗುತ್ತವೆ. ನಮ್ಮ ಚಿಂತನೆಗಳ ಮೇಲೆ ವೇದ, ಉಪನಿಷತ್ತು, ಪುರಾಣ, ರಾಮಾಯಣ, ಮಹಾಭಾರತಗಳಲ್ಲದೇ ಸಂವಿಧಾನವೂ ಹೇಗೆ ಬೆಳಕು ಚೆಲ್ಲಿದೆ ಎನ್ನುವ ಆಶಯ ಇಲ್ಲಿಯ ಲೇಖನಗಳ ಹಿಂದಿದೆ. ಇಂತಹ ಪರಿಕಲ್ಪನೆಯೊಂದನ್ನು `ದರ್ಶನ ವ್ಯಕ್ತಿತ್ವ’ದ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಶ್ರೀಗಂಗಾಧರ ಶೆಟ್ಟಿ ಅವರ ನೂರರ ನೆನಪಿಗೆ ಅರ್ಪಿಸಿರುವುದು ಅರ್ಥ ಪೂರ್ಣವಾಗಿದೆ. ಒಂದು ಶತಮಾನವನ್ನು ಕಂಡ ಸಾರ್ಥಕ ಬದುಕಿಗೆ ನಿಜದ ಗೌರವವೂ ಇದಾಗಿದೆ. ಇದುವರೆಗಿನ ಅಭಿನಂದನಾಗ್ರಂಥಗಳಿಗಿಂತಲೂ ಇದು ಭಿನ್ನ ಆಶಯ ಮತ್ತು ಸ್ವರೂಪವನ್ನು ಪಡೆದುಕೊಂಡಿದೆ.
ಭಾರತೀಯರು ಮೂಲತಃ ಆಧ್ಯಾತ್ಮ ಪ್ರಿಯರು. ಅತ್ಯಂತ ಪ್ರಖರ ವೈಚಾರಿಕತೆಯನ್ನು ಹೊಂದಿದ್ದ ಬಾಬಾ ಸಾಹೇಬ ಅಂಬೇಡ್ಕರ್ ಹೇಳುವಂತೆ- ಮುಕ್ತ ಸಮಾಜಕ್ಕೆ ಧರ್ಮದ ಅಗತ್ಯವಿದೆ. ನಿಜಧರ್ಮವನ್ನು ಮಾನವನ ಹೃದಯದಲ್ಲಿ ಸ್ಥಾಪಿಸಬೇಕಾಗಿದೆ. ಅದಕ್ಕೆ ಅನೇಕ ಮಾರ್ಗಗಳಿವೆ. ಅಂತಹ ಮಾರ್ಗಗಳ ಬಹುರೂಪತೆಯನ್ನು ಇಲ್ಲಿನ ಲೇಖನಗಳು ಪಡೆದುಕೊಂಡಿವೆ. ಧರ್ಮ, ಆಧ್ಯಾತ್ಮ, ಪುರಾಣ, ಚರಿತ್ರೆ ಎಂದಾಕ್ಷಣ ಸಿನಿಕರಾಗುವ ಅಗತ್ಯವಿಲ್ಲ. ಅದರಲ್ಲಿರುವ ಬೆಳಕನ್ನು ಪಡೆದುಕೊಳ್ಳುವ ಮನಃಸ್ಥಿತಿಯನ್ನು ನಾವು ರೂಪಿಸಿಕೊಳ್ಳಬೇಕಾಗಿದೆ- ಬಾಬಾ ಸಾಹೇಬರು ರೂಪಿಸಿಕೊಂಡ ಹಾಗೆಯೇ. ಇಡೀ ದೇಶವೇ ಸಂವಿಧಾನದ ಮೂಲಕ ನಡೆಯುತ್ತಿದ್ದರೂ ಅಂತರಂಗದಲ್ಲಿ ಇನ್ನೂ ಭಗವದ್ಗೀತೆಯೇ ನಮಗೆ ಪ್ರಮಾಣವಾಗಿದೆ. ಆದರೆ ನಮ್ಮ ಸಂವಿಧಾನವು ಬುದ್ಧ ತತ್ತ್ವಗಳ ಆಶಯಗಳಾದ ಕರುಣೆ, ಸಹೋದರತ್ವ, ಸಮಾನತೆಗಳಿಂದ ರೂಪುಗೊಂಡಿದೆ. `ಎಲ್ಲಧರ್ಮ ಸಂಸ್ಥಾಪಕರು ತಾವು ಮುಕ್ತಿದಾತರು ಎಂಬ ನಿಲುಮೆಯನ್ನು ತಳೆದವರಾಗಿದ್ದರು. ಆದರೆ ಬುದ್ಧನು ಮಾತ್ರ ತನ್ನ ಸುತ್ತಲೂ ದೈವಿಕ ವಲಯವನ್ನೂ ನಿರ್ಮಿಸಿಕೊಳ್ಳದೆ ತಾನೊಬ್ಬ ಮಾರ್ಗದಾತ ಎಂದು ಸಾರಿದ. ಆ ಬುದ್ಧನ ಧರ್ಮವೇ ನೀತಿಧರ್ಮವಾಗಿದೆ’ ಎನ್ನುತ್ತಾರೆ ಅಂಬೇಡ್ಕರ್. ಅವರನ್ನು ಪ್ರಪಂಚದ ಎಲ್ಲ ಧಾರ್ಮಿಕ ಮುಖಂಡರು ತಮ್ಮ ಧರ್ಮವನ್ನು ಸ್ವೀಕರಿಸಲು ವಿನಂತಿಸಿದಾಗ, ಆಮಿಷಗಳನ್ನು ಒಡ್ಡಿದಾಗ `ನಾನು ಸ್ವೀಕರಿಸುವ ಧರ್ಮ ಈ ನೆಲದಲ್ಲಿಯೇ ಹುಟ್ಟಿರಬೇಕು’ ಎಂಬುದು ಅಂಬೇಡ್ಕರ್ ಮಾನದಂಡವಾಗಿತ್ತು. `ಬೌದ್ಧಧರ್ಮವು ಕೇವಲ ಧಾರ್ಮಿಕ ವಿಧಿ ವಿಧಾನಗಳ ಧರ್ಮವಾಗಿರದೆ ಸಮಾಜ ಜೀವನದ ತತ್ತ್ವಜ್ಞಾನವಾಗಿದೆ. ನಿಜವಾದ ಅರ್ಥದಲ್ಲಿ ಅದು ಸಾಮ್ಯವಾದ’ ಎಂದಿದ್ದರು ಅವರು. ಇಂತಹ `ಬಹುವಚನ ಭಾರತ’ದ ಅಂತಃಶಕ್ತಿಯನ್ನು ಪ್ರತಿನಿಧಿಸುವ ಈ ಕೃತಿಯು ‘ಭಾರತದ ಸಂವಿಧಾನ’ಕ್ಕೆ ‘ಭಾರತೀಯ ವಾಙ್ಮಯ’ದ ಸ್ವರೂಪಕೊಟ್ಟಿರುವುದು ಗಮನಾರ್ಹ ಸಂಗತಿಯಾಗಿದೆ.
–ವೆಂಕಟಗಿರಿ ದಳವಾಯಿ
(ಬೆನ್ನುಡಿಯಿಂದ
– See more at: https://abhinavabook.myinstamojo.com/product/2972048/-7baa6/#sthash.2V0Hp9cl.dpuf
Reviews
There are no reviews yet.