Description
ವ್ಯಾಸರಾವ್ ನಿಂಜೂರ್ ಅವರ ಸಮಗ್ರ ಕಥೆಗಳನ್ನು ಕುರಿತು ಪ್ರಸಿದ್ಧ ಲೇಖಕರಾದ ಜಯಂತಕಾಯ್ಕಿಣಿ ಹಾಗೂ ಈಶ್ವರಯ್ಯ ಅವರ ಅಭಿಪ್ರಾಯ ಹೀಗಿದೆ .
ಜೀವರಸಾಯನ ಶಾಸ್ತ್ರಜ್ಞರಾಗಿ,ಅಣುವಿಜ್ಞಾನಿಯಾಗಿ,ಮುಂಬಯಿಗನಾಗಿ,ಬೆಳೆದ ನಿಂಜೂರರ ಕಥೆಗಳ ಲೋಕವೂ ತನ್ನ ಕಾಣ್ಕೆಯಲ್ಲಿ,ವಿವರಗಳಲ್ಲಿ ವಿಸ್ತಾರದ ಜತೆಗೆ ಧ್ವನಿವಿಸ್ತಾರವನ್ನೂ ಪಡೆಯುತ್ತ ಹೋಗಿದೆ.ಅದ್ಭುತ ಪಾತ್ರ ಚಿತ್ರಣ,ಅನುಭವದಿಂದಲೇ ಬರಬಹುದಾದ ವಾತಾವರಣ ಸೃಷ್ಟಿ,ತೀರ್ಪುಗಾರಿಕೆಯ ತೆವಲಿಲ್ಲದ ಮುಕ್ತ ನೋಟ ಮತ್ತು ನವಿರಾದ ತುಂಟ ವಿನೋದಗಳಿಂದ ಮನವನ್ನು ಕರಗಿಸಿ ಹಿಗ್ಗಿಸಬಲ್ಲ ನಿಂಜೂರರ ಕಥೆಗಳು ದಕ್ಷಿಣ ಕನ್ನಡದ ಗ್ರಾಮ ಮತ್ತು ಮುಂಬಯಿಯ ನಡುವೆ ನಿಗೂಢ ನೈಟ್ ಬಸ್ಸುಗಳಂತೆ ಓಡಾಡುತ್ತಿರುತ್ತವೆ.ಎಷ್ಟೆಲ್ಲ ಅಪ್ಪಟ ಜೀವಿಗಳನ್ನು ತನ್ಮಯತೆಯಿಂದ ಕೆಮ್ಮಣ್ಣಿನ ಬೆರಳುಗಳಿಂದ ರೂಪಿಸುವ ನಿಂಜೂರರ ಕಥೆಗಾರಿಕೆ,ಕಳೆದ ಆರು ದಶಕಗಳಲ್ಲಿ ಬಂದು ಹೋದ ಕನ್ನಡದ ವಿವಿಧ ಸಾಹಿತ್ಯಕ ಚಳುವಳಿಗಳ ಮೇಲುಸ್ತರದ ಪ್ರಭಾವಗಳಿಗೆ ಆಮಿಷಗಳಿಗೆ ಕಿಂಚಿತ್ತೂ ಬಲಿಯಾಗದೇ,ತನ್ನದೇ ಆದ ಗಟ್ಟಿ ಒಳನೋಟಕ್ಕೆ ಮುಕ್ತ ಜೀವನ ದರ್ಶನಕ್ಕೆ ಪಕ್ಕಾಗುತ್ತ ಬಂದ ರೀತಿ ಹೃದ್ಯವಾಗಿದೆ .
-ಜಯಂತ ಕಾಯ್ಕಿಣಿ
ಡಾ.ನಿಂಜೂರ್ ವೃತ್ತಿ ರಂಗದಲ್ಲಿ ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ವೈಜ್ಞಾನಿಕ ಲೇಖನಗಳನ್ನು ಬರೆದು ಪ್ರಸಿದ್ಧರಾದ ವಿಜ್ಞಾನಿ,ಪ್ರವೃತ್ತಿಯಲ್ಲಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡ ಸಾಹಿತಿ.ಬಹಳ ಸೂಕ್ಷ್ಮವಾಗಿ ಸನ್ನಿವೇಶವನ್ನು,ವ್ಯಕ್ತಿತ್ವಗಳನ್ನು ಅವರು ತಟಸ್ಥ ನಿಲುವಿನಿಂದ ಗಮನಿಸುತ್ತಾರೆ.ಸಾಹಿತ್ಯ ಪ್ರಕಾರಗಳಲ್ಲಿ ಹೃದ್ಯವಾಗಿ ಅವನ್ನು ನಮ್ಮೆದುರು ತಂದಿರಿಸುತ್ತಾರೆ.ಹಾಗಾಗಿ ಕತೆಯಿರಲಿ,ಕಾದಂಬರಿಯಿರಲಿ,ನಿಂಜೂರರು ಅದನ್ನು ಬಿತ್ತರಿಸಿದಾಗ ನಾವೂ ಅದರೊಳಗೊಂದು ಸಕ್ರಿಯ ಪಾತ್ರವಾಗಿರುವ ಅನುಭವವನ್ನು ಪಡೆಯುತ್ತೇವೆ.ನಿಷ್ಕಲ್ಮಶವಾದ ನಗುವನ್ನು,ನಂಜಿಲ್ಲದ ತಿಳಿ ಹಾಸ್ಯವನ್ನು ಎಲ್ಲರಿಗೂ ಹಂಚಿ ಸುಖಿಸುವವರು ಅವರು. ಬದುಕು ಬರೆಹ ಎರಡರಲ್ಲೂ ಸಂಯಮ,ರುಚಿಶುದ್ಧಿ ಇತ್ಯಾತ್ಮಕತೆಯನ್ನು ಕಾಯ್ದುಕೊಂಡು ಬಂದ ಡಾ.ವ್ಯಾಸರಾವ್ ನಿಂಜೂರ್ ಸ್ನೇಹಜೀವಿ,ಉದಾರಿ.
-ಈಶ್ವರಯ್ಯ
Reviews
There are no reviews yet.